ಭದ್ರಾವತಿ ಎಸ್.ದೇವಪ್ಪ ಮನೆಯ ಮೇಲಿನ ತಾರಸಿಯಲ್ಲಿ ವಿವಿಧ ತರಕಾರಿ ಗಿಡ ಬೆಳೆದಿರುವುದು. 
ಶಿವಮೊಗ್ಗ

ಮನೆ ಮಹಡಿಯಲ್ಲಿ ಹಸಿರೀಕರಣ | Greenery

ಭದ್ರಾವತಿ: ನಿವೃತ್ತ ಜೀವನ ಕಳೆಯುವುದೇ ಕಷ್ಟ ಎಂದು ಆಲೋಚಿಸುವವರೇ ಹೆಚ್ಚು. ಆದರೆ ಸಿದ್ದಾರೂಢನಗರದ ನಿವಾಸಿ, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎಸ್.ದೇವಪ್ಪ ತಮ್ಮ ಮನೆಯ ತಾರಸಿಯಲ್ಲೇ ತರಕಾರಿ, ಸುಪ್ಪು ಬೆಳೆದು ಮಾದರಿಯಾಗಿದ್ದಾರೆ.
ದೇವಪ್ಪ ಅವರಿಗೆ ಈಗ 94 ವರ್ಷ. ಕೃಷಿ ಇಲಾಖೆಯಿಂದ ನಿವೃತ್ತರಾಗಿ ಸುಮಾರು 36 ವರ್ಷ ಕಳೆದಿವೆ. ಅಂದಿನಿಂದಲೂ ಮನೆ ಮೇಲಿನ ತಾರಸಿಯಲ್ಲಿ ವಿವಿಧ ಬಗೆಯ ಪಾಟ್‌ಗಳನ್ನು ತಂದು ತರಕಾರಿ, ಸೊಪ್ಪು ಬೆಳೆಯುತ್ತಿದ್ದಾರೆ. ಪತ್ನಿ ಹಿರಿಯಮ್ಮ ಜತೆಗೂಡಿ ನಿತ್ಯವೂ ಬೆಳಗ್ಗೆ ಮತ್ತು ಸಂಜೆ ಗಿಡಗಳಿಗೆ ನೀರೆರೆಯುವ ಮೂಲಕ ಸಸ್ಯಗಳಿಗೆ ಜೀವ ತುಂಬುತ್ತಾರೆ. ಮನೆಗೆ ಬೇಕಾಗುವಷ್ಟು ತರಕಾರಿ, ಸೊಪ್ಪು ತಾರಸಿ ತೋಟದಿಂದಲೇ ಸಿಗುತ್ತಿದೆ. ಇದೀಗ ಮನೆಯ ಮೆಟ್ಟಿಲು ಹತ್ತಲು ಆಗದ ಪರಿಸ್ಥಿತಿ ಇರುವುದರಿಂದ ಪಾಟ್‌ಗಳನ್ನು ಇತರರಿಗೆ ಉಚಿತವಾಗಿ ಕೊಡುವ ಆಲೋಚನೆ ಹೊಂದಿದ್ದಾರೆ.
ಸುಮಾರು 200 ಪಾಟ್‌ಗಳನ್ನು ಮನೆಯ ತಾರಸಿ(ಆರ್‌ಸಿಸಿ) ಹಾಗೂ ಪ್ಯಾರಾಪಾಟ್ ವಾಲ್‌ಗಳ ಸುತ್ತಲೂ ಜೋಡಿಸಿಟ್ಟು ಅದಕ್ಕೆ ಮಣ್ಣು, ನೀರು ಸಕಾಲದಲ್ಲಿ ಪೋಷಕಾಂಶಗಳನ್ನು ಕೊಡುವ ಮೂಲಕ ಬಿಸಿಲ ಬೇಗೆಯಲ್ಲಿಯೂ ಹಸಿರನ್ನು ಕಾಪಾಡಿಕೊಂಡು ಬಂದಿದ್ದಾರೆ. 
ಹರಿವೆಸೊಪ್ಪು, ದಂಟು, ಪಾಲಕ್, ಮೆಂತ್ಯಾ, ಸಬಸಿಗೆ ಸೊಪ್ಪು, ಪುದೀನ, ಕೊತ್ತಂಬರಿ ಸೊಪ್ಪು, ಮೂಲಂಗಿ, ಬದನೆಕಾಯಿ, ಟೊಮ್ಯಾಟೊ, ಹೂವುಗಳಲ್ಲಿ ಸೇವಂತಿಗೆ, ಕನಕಾಂಬರ, ಮಲ್ಲಿಗೆ ಗಿಡಗಳನ್ನು ಬೆಳೆದಿದ್ದಾರೆ. ಕೆಲವರು ಇಲಾಖೆಯಿಂದ ಬರುವ ಪೆನ್ಷನ್‌ನಲ್ಲಿ ಆರಾಮವಾಗಿ ಜೀವನ ಕಳೆಯುತ್ತಾರೆ. ಆದರೆ ಇವರು ನಿವೃತ್ತಿಯ ನಂತರವೂ ಹವ್ಯಾಸ ಮುಂದುವರಿಸಿದ್ದಾರೆ.