ಶಿವಮೊಗ್ಗದಲ್ಲಿ ಜಿಲ್ಲಾ ಮಟ್ಟದ ಶರಣ ಸಾಹಿತ್ಯ ಸಮ್ಮೇಳನವನ್ನು ಡಾ. ಸಿ.ಸೋಮಶೇಖರ್ ಉದ್ಘಾಟಿಸಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಿ.ವೈ.ರಾಘವೇಂದ್ರ, ಎಚ್.ಎನ್.ಮಹಾರುದ್ರ, ಎಸ್.ಎಸ್.ಜ್ಯೋತಿಪ್ರಕಾಶ್ ಇತರರಿದ್ದರು.
- ಬದುಕಿಗೆ ಬೇಕಾದ ಮೌಲ್ಯಗಳು ವಚನಗಳಲ್ಲಿ ಅಡಕ
- ಬೆಕ್ಕಿನ ಕಲ್ಮಠದ ಶ್ರೀಗಳ ಒತ್ತಾಯ
- 7ನೇ ಜಿಲ್ಲಾ ಮಟ್ಟದ ಶರಣ ಸಾಹಿತ್ಯ ಸಮ್ಮೇಳನ
ಶಿವಮೊಗ್ಗ: ಅಲ್ಲಮಪ್ರಭು, ಅಕ್ಕಮಹಾದೇವಿ (akkamahadevi) ಸೇರಿ ಅನೇಕ ಶರಣರು ಶಿಕಾರಿಪುರ (shikaripura) ತಾಲೂಕಿನವರು ಎಂಬುದೇ ಶಿವಮೊಗ್ಗ ಜಿಲ್ಲೆಯ ಹೆಮ್ಮೆ. ಶಿಕಾರಿಪುರದ ಮಣ್ಣಿನ ಕಣಕಣದಲ್ಲೂ ಶರಣರ ಕುರುಹುಗಳಿವೆ ಎಂದು ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ (swamiji) ತಿಳಿಸಿದರು.
ಶರಣ ಸಾಹಿತ್ಯ ಪರಿಷತ್‌ನಿಂದ ಮಂಗಳವಾರ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಎರಡು ದಿನಗಳ 7ನೇ ಜಿಲ್ಲಾ ಮಟ್ಟದ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಗಳು, ವಿಶ್ವದಲ್ಲಿ ಯುದ್ಧದ ಕಾರ್ಮೋಡ ಆವರಿಸಿಕೊಂಡಿದೆ. ಮನುಷ್ಯನ ಬದುಕು ಅನಿಶ್ಚಿತತೆಯಿಂದ ಕೂಡಿದೆ. ಹೀಗಾಗಿ ವಚನ ಸಾಹಿತ್ಯದ ಮಾರ್ಗವೊಂದೇ ಎಲ್ಲದಕ್ಕೂ ಪರಿಹಾರ ಎಂದರು.
ಮಲೆನಾಡಿನಲ್ಲಿ ಶರಣರ ಪ್ರಾಧಿಕಾರ ರಚನೆಯಾಗಬೇಕೆಂಬ ಆಗ್ರಹದ ನಡುವೆ ಪ್ರಾಧಿಕಾರವೇನೋ ಅಸ್ತಿತ್ವಕ್ಕೆ ಬಂದಿತು. ಆದರೆ ಅನುದಾನದ ಕೊರತೆಯಿಂದ ಅದು ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಈ ಪ್ರಾಧಿಕಾರಕ್ಕೆ ಸರ್ಕಾರ ಸೂಕ್ತ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಶಿವಮೊಗ್ಗ ಜಿಲ್ಲೆ ಪ್ರಾಕೃತಿಕವಾಗಿ ಸಂಪದ್ಭರಿತ. ರಾಜಕೀಯ, ಸಾಹಿತ್ಯ ಹಾಗೂ ಹೋರಾಟದ ದೃಷ್ಟಿಯಿಂದ ನೋಡಿದರೂ ಶಿವಮೊಗ್ಗ ರಾಷ್ಟ್ರಮಟ್ಟದಲ್ಲೇ ಗಮನಸೆಳೆದಿದೆ. ಇಂತಹ ಮಣ್ಣಿನಿಂದ ಬಂದ ಅಕ್ಕಮಹಾದೇವಿ, ಅಲ್ಲಮಪ್ರಭು ಮತ್ತಿತರರು ನಮ್ಮೆಲ್ಲರ ಜೀವನಕ್ಕೆ ಬೇಕಾದ ಮೌಲ್ಯ ಒದಗಿಸುವ ವಚನಗಳನ್ನು ನೀಡಿದ್ದಾರೆ ಎಂದರು.
ನಾವು ಕೆಳದಿ ಅರಸರ ಮನೆತನವನ್ನು ನೆನೆಯಬೇಕು. ತೆರಿಗೆಯನ್ನು ಅತ್ಯಂತ ವ್ಯವಸ್ಥಿತಗೊಳಿಸಿದ್ದು ಶಿವಪ್ಪ ನಾಯಕ. ಕೆಳದಿ ಚನ್ನಮ್ಮ ಶಿವಾಜಿಯ ಮಗ ರಾಜಾರಾಮನಿಗೆ ಆಶ್ರಯ ನೀಡಿದ್ದು ಮಾತ್ರವಲ್ಲ, ಔರಂಗಜೇಬನನ್ನು ಯುದ್ಧದಲ್ಲಿ ಸೋಲಿಸಿದ್ದಳು. ಆಕೆ ತನ್ನ ವೀರತ್ವ ಮೆರೆಯದೇ ಇದ್ದಿದ್ದರೆ ಇಂದು ಮಹಾರಾಷ್ಟ್ರ ಅಸ್ತಿತ್ವದಲ್ಲೇ ಇರುತ್ತಿರಲಿಲ್ಲ ಎಂದು ಹೇಳಿದರು.
ಮನುಕುಲದ ಸಮಗ್ರ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಿದ್ದು ಬಸವಣ್ಣ. ಅವರದು ಅತ್ಯಂತ ಅಪರೂಪದ ವ್ಯಕ್ತಿತ್ವ. ಶರಣರು ರಚಿಸಿದ ವಚನ ಸಾಹಿತ್ಯಗಳ ಬೆಳವಣಿಗೆಗೆ ಶ್ರಮಿಸುವುದು ಹಾಗೂ ಸಂರಕ್ಷಣೆ ಮಾಡುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿರುವ ಶರಣ ಸಾಹಿತ್ಯ ಪರಿಷತ್ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಎಂದರು.
6ನೇ ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಸಾಹಿತಿ ಅಂಬ್ರಯ್ಯಮಠ ಅವರು ಬೆಕ್ಕಿನ ಕಲ್ಮಠದ ಶ್ರೀಗಳಿಗೆ ಷಟ್‌ಸ್ಥಲ ಧ್ವಜವನ್ನು ಹಸ್ತಾಂತರಿಸಿದರು. ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಇತರರಿದ್ದರು.
ಶಿಕಾರಿಪುರದಲ್ಲಿ ರಾಜ್ಯ ಸಮ್ಮೇಳನ
ಶರಣರ ಸಾಹಿತ್ಯವನ್ನು ಇಂದಿನ ಪೀಳಿಗೆಗೆ ತಲುಪಿಸುವ ಮಹತ್ಕಾರ್ಯ ಇದಾಗಿದೆ. ಅಲ್ಲಮಪ್ರಭುವಿನ ವೈರಾಗ್ಯ, ಅಕ್ಕಮಹಾದೇವಿಯ ಭಕ್ತಿ ಈ ಮಣ್ಣಿನ ಕಣದಲ್ಲಿದೆ. ಶರಣರಿಗೆ ಜನ್ಮ ನೀಡಿದ ಶಿವಮೊಗ್ಗ ಜಿಲ್ಲೆ ಸಾಮಾಜಿಕ, ಆದ್ಯಾತ್ಮಿಕ ನೆಲೆಬೀಡಾಗಿದೆ. ಯುವಶಕ್ತಿ ಇಂದು ಖಿನ್ನತೆಯಿಂದ ಬಳಲುತ್ತಿದೆ. ಶರಣ ಸಾಹಿತ್ಯದ ವಿಚಾರಗಳನ್ನು ಯುವಕರಿಗೆ ತಲುಪಿಸಿದರೆ ಅವರನ್ನು ಖಿನ್ನತೆಯಿಂದ ಹೊರತರಬಹುದು. ಮುಂಬರುವ ದಿನಗಳಲ್ಲಿ ರಾಜ್ಯಮಟ್ಟದ ಶರಣ ಸಾಹಿತ್ಯ ಸಮ್ಮೇಳನವನ್ನು ಶಿಕಾರಿಪುರದ ಉಡುತಡಿಯಲ್ಲಿ ಆಯೋಜಿಸಲು ಅವಕಾಶ ಮಾಡಿಕೊಡಬೇಕೆಂದು ಶರಣ ಸಾಹಿತ್ಯ ಪರಿಷತ್ ಪದಾಧಿಕಾರಿಗಳಲ್ಲಿ ಸಂಸದ ಬಿ.ವೈ.ರಾಘವೇಂದ್ರ ವಿನಂತಿಸಿದರು.
ಲೋಕ ಕಲ್ಯಾಣಕ್ಕೆ ಪೂರಕ
ವಚನ ಸಾಹಿತ್ಯ ಲೋಕಕಲ್ಯಾಣಕ್ಕೆ ಪೂರಕವಾಗಿದೆ. ವಚನ ಸಾಹಿತ್ಯ ಎಂಬುದು ವಿಶ್ವಕ್ಕೆ ನೀಡಿದ ನೀತಿಯ ಸಂವಿಧಾನ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಸಿ.ಸೋಮಶೇಖರ ಹೇಳಿದರು. ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡವರು ವಚನ ಸಾಹಿತ್ಯವನ್ನು ಬೆಳೆಸಿದರು. ಮಾನವ ಕಲ್ಯಾಣಕ್ಕಾಗಿ ವಿನೂತನ ಕ್ರಾಂತಿ ಎಂದರೆ ಅದು 12ನೇ ಶತಮಾನದಲ್ಲಿ ಶರಣರು ನಡೆಸಿದ ಸಮಗ್ರ ಕ್ರಾಂತಿ. ವಚನ ಸಾಹಿತ್ಯದ ಬಗ್ಗೆ ಮಕ್ಕಳಲ್ಲಿ ಸರಿಯಾದ ಅರಿವು ಮೂಡಿಸಬೇಕಾದ ಅವಶ್ಯಕತೆಯಿದ ಎಂದರು.
ವಿಶಿಷ್ಟ ಪ್ರಕಾರದ ಸಾಹಿತ್ಯ
ವಚನ ಸಾಹಿತ್ಯ ವಿಶಿಷ್ಟ ಪ್ರಕಾರದಲ್ಲಿದೆ. ಅದಕ್ಕೆ ಇತರೆ ಸಾಹಿತ್ಯಗಳಂತೆ ಯಾವುದೇ ಶಿಷ್ಟಾಚಾರದ ಚೌಕಟ್ಟಿಲ್ಲ. ಅನುಭಾವ, ಅಭಿವ್ಯಕ್ತಿಯನ್ನು ಪ್ರಕಟಿಸುವ, ಜನರಿಗೆ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ವಿಚಾರಗಳನ್ನು ತಲುಪಿಸಿದ್ದು ಶರಣ ಸಾಹಿತ್ಯದ ಹೆಗ್ಗಳಿಕೆಯಾಗದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು. ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ನಾನು, ನನ್ನದು ಮತ್ತು ದ್ವೇಷ, ಪ್ರತಿಷ್ಠೆ ಇವುಗಳನ್ನು ತೊರೆದಾಗ ಯುದ್ಧ ಎನ್ನುವಂತಹ ಸಂದರ್ಭವೇ ಬರುವುದಿಲ್ಲ. ವಚನ ಸಾಹಿತ್ಯ ಪ್ರತಿಯೊಬ್ಬರ ಬದುಕಿನ ಚೌಕಟ್ಟು. ವಚನ ಸಾಹಿತ್ಯವಿದ್ದರೆ ಸುಂದರ ಬದುಕನ್ನು ಸಾಗಿಸಬಹುದು ಎಂದರು. ವಚನ ಸಾಹಿತ್ಯ ಇತ್ತೀಚೆಗೆ ಹೆಚ್ಚಿನ ಪ್ರಚಾರಕ್ಕೆ ಬರುತ್ತಿದೆ. ವಚನಗಳು ಬಹಳ ಹಿಂದೆಯೇ ಬೇರೆ ಭಾಷೆಗಳಿಗೆ ತರ್ಜುಮೆಗೊಂಡು ವಿಶ್ವದ ಇತರೆ ದೇಶದ ಜನರ ಓದಿಗೆ ನಿಲುಕಿದ್ದರೆ ಇಂದು ಸಾಕಷ್ಟು ಜನಪ್ರಿಯವಾಗುತ್ತಿದ್ದವು. ಹಾಗೆ ನೋಡಿದರೆ ಇಡೀ ವಿಶ್ವದಲ್ಲೇ ಮೊದಲ ಬಾರಿಗೆ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪರಿಚಯಿಸಿದವರು 12ನೇ ಶತಮಾನದ ಶರಣರು ಎಂದು ಶ್ರೀಗಳು ಬಣ್ಣಿಸಿದರು.