ಶಿವಮೊಗ್ಗದಲ್ಲಿ ಪಿಎಂ ವಿಶ್ವಕರ್ಮ ಯೋಜನೆಯ ಫಲಾನುಭವಿಗಳು ಸಿದ್ಧಪಡಿಸಿದ ವಿವಿಧ ವಸ್ತುಗಳ ಪ್ರದರ್ಶನ ಮತ್ತು ವ್ಯಾಪಾರ ಮೇಳವನ್ನು ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಮಾಲತೇಶ್, ಶಿವಕುಮಾರ್, ದೇವರಾಜ್, ಸುರೇಶ್ ಇದ್ದರು. 
ಶಿವಮೊಗ್ಗ

ವಿಶ್ವಕರ್ಮ ಯೋಜನೆಗೆ ಅನುದಾನ ಮೀಸಲು I vishwakarma scheme

ಪ್ರಮುಖ ಮುಖ್ಯಾಂಶಗಳು

  • 1.25 ಲಕ್ಷ ಮಂದಿಗೆ ಸಾಲ ವಿತರಣೆ
  • ಸಂಸದ ಬಿ.ವೈ.ರಾಘವೇಂದ್ರ ಹೇಳಿಕೆ
  • ವಿವಿಧ ವಸ್ತುಗಳ ಪ್ರದರ್ಶನ, ವ್ಯಾಪಾರ ಮೇಳ
ಶಿವಮೊಗ್ಗ: ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ (budget) ನಲ್ಲಿ ವಿಶ್ವಕರ್ಮ ಯೋಜನೆ (scheme) ಗೆ 13 ಸಾವಿರ ಕೋಟಿ ರೂ. ಮೀಸಲಿರಿಸಿದೆ. ಯೋಜನೆಗೆ ಆಯ್ಕೆಯಾದವರು ಸ್ವಂತ ಉದ್ಯೊಗ ಕೈಗೊಳ್ಳಲು ಶೇ.5ರ ಬಡ್ಡಿ ದರದಲ್ಲಿ ಮೂರು ಲಕ್ಷ ರೂ.ವರೆಗೆ ಸಾಲ (loan) ನೀಡಲಾಗುತ್ತದೆ. ನಿರುದ್ಯೋಗಿಗಳು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕೆಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಎಂಎಸ್‌ಎಂಇ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಪಿಎಂ ವಿಶ್ವಕರ್ಮ ಯೋಜನೆಯ ಫಲಾನುಭವಿಗಳು ಸಿದ್ಧಪಡಿಸಿದ ವಿವಿಧ ವಸ್ತುಗಳ ಮೂರು ದಿನಗಳ ಪ್ರದರ್ಶನ ಮತ್ತು ವ್ಯಾಪಾರ ಮೇಳ ಉದ್ಘಾಟಿಸಿ ಮಾತನಾಡಿದರು.
ಯುವಕರು, ಕುಶಲಕರ್ಮಿಗಳು ಸ್ವಾವಲಂಬಿ ಮತ್ತು ಸ್ವಾಭಿಮಾನದ ಬದುಕು ರೂಢಿಸಿಕೊಳ್ಳಬೇಕೆಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ವಿಶ್ವಕರ್ಮ ಯೋಜನೆ ರೂಪಿಸಿದ್ದಾರೆ. ಯೋಜನೆಯಲ್ಲಿ ಕೆಲಸ ಮಾಡುವವರಿಗೆ ಗುರುತಿನ ಚೀಟಿ, ಸುಮಾರು 50 ಸಾವಿರ ರೂ. ಮೌಲ್ಯದ ಸಲಕರಣೆಗಳ ಕಿಟ್ ನೀಡಲಾಗುತ್ತದೆ ಎಂದರು.
ಯೋಜನೆಯಡಿ ರಾಜ್ಯದಲ್ಲಿ 22 ಲಕ್ಷ ಅರ್ಜಿಗಳು ಸ್ವೀಕೃತವಾಗಿದ್ದು, 5,39,348 ಅರ್ಜಿಗಳ ಪರಿಶೀಲನೆ ಪೂರ್ಣಗೊಂಡು 1.25 ಲಕ್ಷ ಮಂದಿಗೆ ಸಾಲ ವಿತರಿಸಲಾಗಿದೆ. ಈ ಯೋಜನೆಯಿಂದ ಎಸ್ಸಿ, ಎಸ್ಟಿ, ರೈತ ಕುಟುಂಬಗಳು, ಕುಶಲಕರ್ಮಿಗಳಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಬೀದಿ ಬದಿ ವ್ಯಾಪಾರಸ್ಥರಿಗೂ 50 ಸಾವಿರ ರೂ.ವರೆಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದು ವಿವರಿಸಿದರು.
ಎಂಎಸ್‌ಎಂಇ ನಿರ್ದೇಶಕ ಕೆ.ದೇವರಾಜ್, ಸಹಾಯಕ ನಿರ್ದೇಶಕ ಶಿವಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಎಚ್.ಸುರೇಶ್, ಎಂಎಸ್‌ಎಂಇ ತರಬೇತಿ ಅಧಿಕಾರಿ ಗೀತಾ, ಪಾಲಿಕೆ ಮಾಜಿ ಸದಸ್ಯ ಮಾಲತೇಶ್ ಇತರರಿದ್ದರು.

ವಿವಿಧ ಉತ್ಪನ್ನಗಳು

ವಿಶ್ವಕರ್ಮ ಯೋಜನೆಯಡಿ ಪ್ರಯೋಜನ ಪಡೆದು ಸ್ವಯಂ ಉದ್ಯೋಗ ಆರಂಭಿಸಿದ ಅನೇಕರು ತಾವು ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟಕ್ಕೂ ಅವಕಾಶ ಕಲ್ಪಿಸಿದ್ದರು. 50ಕ್ಕೂ ಹೆಚ್ಚು ಸ್ಟಾಲ್‌ಗಳನ್ನು ಅಂಬೇಡ್ಕರ್ ಭವನದ ಆವರಣದಲ್ಲಿ ಇದಕ್ಕಾಗಿ ಸಿದ್ಧಪಡಿಸಲಾಗಿತ್ತು. ವಿವಿಧ ಕರಕುಶಲ ವಸ್ತುಗಳು, ಹಸೆ ಚಿತ್ತಾರ, ಮಣ್ಣಿನ ಮಡಕೆ, ಕೈಮಗ್ಗ ಉತ್ಪನ್ನಗಳು, ಗೃಹೋಪಯೋಗಿ ವಸ್ತುಗಳು, ತಿಂಡಿ, ತಿನಿಸುಗಳು ಪ್ರಮುಖ ಆಕರ್ಷಣೆಯಾಗಿದ್ದವು.

ಉತ್ತೇಜನಕ್ಕಾಗಿ ಮೇಳ

ಸಣ್ಣ ಉದ್ಯಮಿಗಳನ್ನು ಉತ್ತೇಜಿಸುವ ಈ ಮೇಳ ಮಾ.26ರವರೆಗೆಗೂ ನಡೆಯಲಿದೆ. ಸಣ್ಣ ಉದ್ಯಮಿಗಳಿಗೆ ವಿಶ್ವಕರ್ಮ ಯೋಜನೆಯಡಿ ತರಬೇತಿ ನೀಡಿ, ಆರ್ಥಿಕ ನೆರವು ನೀಡಲಾಗಿದೆ. ಅವರಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಈ ಮೇಳ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಸುಮಾರು 6,500 ಮಂದಿಗೆ ಈ ಯೋಜನೆಯ ಪ್ರಯೋಜನ ಸಿಕ್ಕಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.