ಗಿಣಿವಾಲ ವಡ್ಡಿಗೇರೆ ಗ್ರಾಮದಲ್ಲಿ ರೈತ ಸಂಘ, ಹಸಿರು ಸೇನೆಯ ಗ್ರಾಮ ಘಟಕದ ನಾಮಫಲಕವನ್ನು ಗೌರವಾಧ್ಯಕ್ಷ ಕೆ.ಮಂಜುನಾಥ ಗೌಡ ಉದ್ಘಾಟಿಸಿದರು. ಬಸವಂತಪ್ಪ, ಪರಸಪ್ಪ, ಕಲ್ಲಪ್ಪ, ಭೀಮೇಶ್ ಇತರರಿದ್ದರು.
ಸೊರಬ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಹಿತಕಾಯುವಲ್ಲಿ ಸಂಪೂರ್ಣ ವಿಫಲವಾಗಿವೆ. ರೈತರು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ರೈತ ಸಂಘ ಮತ್ತು ಹಸಿರು ಸೇನೆ ಗೌರವಾಧ್ಯಕ್ಷ ಕೆ.ಮಂಜುನಾಥ ಗೌಡ ಹೇಳಿದರು.
ತಾಲೂಕಿನ ಗಿಣಿವಾಲ ವಡ್ಡಿಗೇರೆ ಗ್ರಾಮದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕ ಉದ್ಘಾಟನೆ ಹಾಗೂ ರೈತ ಸಂಘದ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.
ನಮ್ಮ ದೇಶ ಕೃಷಿ ಪ್ರಧಾನವಾಗಿದ್ದರೂ ರೈತ ದುಸ್ಥಿತಿಗೆ ತಲುಪಿರುವುದು ಶೋಚನೀಯ. ಇಂತಹ ಸಂದರ್ಭದಲ್ಲಿ ಪ್ರಕೃತಿ ವಿಕೋಪದ ದಾಳಿಗೆ ತುತ್ತಾಗಿದ್ದಾರೆ. ಬೆಳೆ ಬಾರದೆ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ನೆರವಿಗೆ ಬಂದಿಲ್ಲ. ಸ್ವಾಮಿನಾಥನ್ ವರದಿಯಂತೆ ಎಪಿಎಂಸಿ ಕಾಯ್ದೆ ಜಾರಿಗೊಳಿಸುವಂತೆ ಒತ್ತಾಯಿಸಲು ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಎಲ್ಲಡೆ ರೈತರ ಗ್ರಾಮ ಘಟಕ ಸ್ಥಾಪಿಸಲಾಗುತ್ತದೆ ಎಂದರು.
ಗ್ರಾಮ ಘಟಕದ ಅಧ್ಯಕ್ಷರಾಗಿ ಬಸವಂತಪ್ಪ, ತಾಲೂಕು ಘಟಕದ ಗೌರವಾಧ್ಯಕ್ಷ ಪರಸಪ್ಪ, ಉಪಾಧ್ಯಕ್ಷ ಕಲ್ಲಪ್ಪ, ಕಾರ್ಯದರ್ಶಿ ಭೀಮೇಶ್ ಹಾಗೂ ಸದಸ್ಯರಾಗಿ ರಾಮಪ್ಪ, ಹುಚ್ರಾಯಪ್ಪ, ಆನಂದಪ್ಪ, ನಾಗಪ್ಪ, ಕುಬೇರಪ್ಪ, ಶೇಖರಪ್ಪ. ನಿಂಗಪ್ಪ, ಪರಮೇಶಿ ಆಯ್ಕೆಯಾಗಿದ್ದಾರೆ. ತಾಲೂಕು ಅಧ್ಯಕ್ಷ ಈಶ್ವರ ಕೊಡಕಣಿ, ಗ್ರಾಮಾಧ್ಯಕ್ಷ ಶಿವಪ್ಪ, ಬಸವಂತಪ್ಪ ಇತರರಿದ್ದರು.
ಭ್ರಷ್ಟರಿಗೆ ಪ್ರವೇಶವಿಲ್ಲ!
ರೈತ ಸಂಘ ಗ್ರಾಮ ಘಟಕದ ನಾಮಫಲಕದಲ್ಲಿ ಭ್ರಷ್ಟ ಸಹಕಾರಿ, ಸರ್ಕಾರಿ, ಬ್ಯಾಂಕ್ ಮತ್ತು ಕಂದಾಯ ಇಲಾಖೆ ನೌಕರರಿಗೆ ಮತ್ತು ಭ್ರಷ್ಟ ರಾಜಕಾರಣಿಗಳಿಗೆ ಗ್ರಾಮದೊಳಗೆ ಪ್ರವೇಶವಿಲ್ಲ. ಪ್ರಾಮಾಣಿಕರಿಗೆ ಸ್ವಾಗತ. ರೈತರನ್ನು ಭೇಟಿ ಮಾಡುವ ಸಮಯ ಸಂಜೆ 6ರಿಂದ 7ರವರೆಗೆ. ಸೋಮವಾರ ರೈತರಿಗೆ ರಜೆ ದಿನ. ಈ ನಿಯಮ ಉಲ್ಲಂಘಿಸಿದವರು ಗ್ರಾಮದ ರೈತರು ತೀರ್ಮಾನಿಸಿದ ಶಿಕ್ಷೆಗೆ ಗುರಿಯಾಗ ಬೇಕಾಗುತ್ತದೆ ಎಂದು ನಮೂದಿಸಲಾಗಿದೆ.