ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್
- 3 ವರ್ಷ ಕಳೆದರೂ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ
- ಸಿಎಂ, ಡಿಸಿಎಂ ಯಾವ ಮುಖ ಇಟ್ಟುಕೊಂಡು ಶಿವಮೊಗ್ಗಕ್ಕೆ ಬರುತ್ತಾರೆ ?
- ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ಕಿಡಿ
ಶಿವಮೊಗ್ಗ: ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಮಲೆನಾಡಿನ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಅಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಧು ಬಂಗಾರಪ್ಪ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದು 3 ವರ್ಷ ಕಳೆದರೂ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಅವರಿಂದ ಸಾಧ್ಯವಾಗಿಲ್ಲ ಎಂದು ಮಲೆನಾಡು ರೈತ ಹೋರಾಟ ಸಮಿತಿ(Raitha Horata Samiti) ಸಂಚಾಲಕ ತೀ.ನ.ಶ್ರೀನಿವಾಸ್ ದೂರಿದರು.
ಶರಾವತಿ ಮುಳುಗಡೆ ಸಂತ್ರಸ್ತರು(Sharavati Victims) ಹಾಗೂ ಅರಣ್ಯ ಭೂಮಿ ಸಾಗುವಳಿದಾರರ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಹಕ್ಕುಪತ್ರ ಕೊಡುವುದಾಗಿ ಪಾದಯಾತ್ರೆ ಮಾಡಿದ್ದರು. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಸರ್ಕಾರ ಈವರೆಗೂ ಸಮಸ್ಯೆ ಬಗೆಹರಿಸುವ ದಿಸೆಯಲ್ಲಿ ಯಾವುದೇ ಸಭೆಗಳನ್ನೂ ಮಾಡಲಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಉಸ್ತುವಾರಿ ಸಚಿವ ಮಧು ಬಂಗಾರಪ್ಪ(Minister Madhu bangarappa) ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೂ ಅರಣ್ಯದ ಬಗ್ಗೆ ಮಾಹಿತಿಯೇ ಇಲ್ಲ. ಮುಳುಗಡೆ ಸಂತ್ರಸ್ತರ ಸಮಸ್ಯೆಗಳೇ ಅವರಿಗೆ ಅರ್ಥವಾಗಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿ ಸುಮ್ಮನಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ 50 ಸಾವಿರ ಜನರ ಹಕ್ಕುಪತ್ರ(Hakkupatra) ವಜಾ ಮಾಡಲು ಕೇಸ್ ಹಾಕಲಾಗಿದೆ. ಶರಾವತಿ, ಅಂಬ್ಲಿಗೊಳ, ಚಕ್ರಾ, ವರಾಹಿ, ಸಾವೆಹಕ್ಲು ಮುಂತಾದ ಅಣೆಕಟ್ಟು ನಿರ್ಮಾಣಕ್ಕೆ ಭೂಮಿ ನೀಡಿದ ರೈತರ ಪರಿಸ್ಥಿತಿ ಶೋಚನೀಯವಾಗಿದೆ. ಭೂಮಿ ಬಿಟ್ಟುಕೊಟ್ಟ ತಪ್ಪಿಗೆ ಸರ್ಕಾರ ಅವರ ಮೇಲೆ ಕೇಸ್ ಹಾಕಿದ್ದಾರೆ. ಗೋಮಾಳ, ಹುಲ್ಲುಬನಿ, ಕಾನು ಮುಂತಾದ ಪ್ರದೇಶಗಳನ್ನು ಅರಣ್ಯ ಎಂದು ಮಾಡಲಾಗಿದೆ ಎಂದು ಆರೋಪಿಸಿದರು.
"
ಮಲೆನಾಡಿನಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಬಗೆಹರಿಸದೆ ಸಿಎಂ ಸಿದ್ದರಾಮಯ್ಯ ಆಗಲಿ, ಡಿಸಿಎಂ ಡಿ.ಕೆ.ಶಿವಕುಮಾರ್ ಆಗಲಿ ಯಾವ ಮುಖ ಇಟ್ಟುಕೊಂಡು ಶಿವಮೊಗ್ಗಕ್ಕೆ ಬರುತ್ತಾರೆ? ಸರ್ಕಾರದ ನಿರ್ಲಕ್ಷೃ ಧೋರಣೆಯನ್ನು ನಾವು ವಿರೋಧಿಸುತ್ತೇವೆ.
— ತೀ.ನ.ಶ್ರೀನಿವಾಸ್, ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ