ಸರ್ಕಾರಿ ನ್ಯಾಯಬೆಲೆ ಅಂಗಡಿ ಚಲನಚಿತ್ರದ ಬ್ಯಾನರ್ ಅನ್ನು ಭದ್ರಾವತಿಯಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್ ಬಿಡುಗಡೆಗೊಳಿಸಿದರು. ಟಿ.ಕೃಷ್ಣಪ್ಪ, ಭಾ.ಮ.ಹರೀಶ್, ಚಂದ್ರು ಇತರರಿದ್ದರು. 
ಶಿವಮೊಗ್ಗ

ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ ಜುಲೈನಲ್ಲಿ ತೆರೆಗೆ

ಭದ್ರಾವತಿ: ನ್ಯಾಯಬೆಲೆ ಅಂಗಡಿ ನಡೆಯುವ ರೀತಿ ಹಾಗೂ ಅನ್ನಭಾಗ್ಯ ಯೋಜನೆಯಲ್ಲಿ ಸರ್ಕಾರದ ಪಾತ್ರದ ಕುರಿತು ಬಿಂಬಿಸುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾ ಜುಲೈ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ ಎಂದು ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಹೇಳಿದರು.
ಪಡಿತರ ವಿತರಕರ ಕಷ್ಟಗಳನ್ನು ಬಿಂಬಿಸುವ ಚಿತ್ರದ ಪ್ರೀಮಿಯರ್ ಶೋ ಜೂ.1ರಂದು ರಾಜ್ಯದ ಎಲ್ಲ ತಾಲೂಕಿನ ಚಿತ್ರಮಂದಿರಗಳಲ್ಲಿ ಆಯೋಜಿಸಿದ್ದು, ನ್ಯಾಯಬೆಲೆ ಅಂಗಡಿ ಮಾಲೀಕರ ಕುಟುಂಬ ಸದಸ್ಯರು ಮೊದಲ ಪ್ರಸಾರ ನೋಡಲು ಉಚಿತ ವ್ಯವಸ್ಥೆ ಕಲ್ಪಿಸಲಾಗಿದೆ. ಅವರಿಗೆ ಕೂಪನ್ ನೀಡಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ವರ್ ಸಮಸ್ಯೆ ತುಂಬ ಇದೆ. ಪಡಿತರದಾರರು ಸರತಿ ಸಾಲಿನಲ್ಲಿ ನಿಂತು ಕಾಯುವ ಪರಿಸ್ಥಿತಿ ಎದುರಾಗಿದೆ. ಸರಿಪಡಿಸಲು ರಾಜ್ಯ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಮಾಡಿದ್ದೇನೆ. ಸರ್ಕಾರದಿಂದ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಬರಬೇಕಾದ ಬಾಕಿ ಹಣದಲ್ಲಿ 45 ಕೋಟಿ ರೂ. ಬಿಡುಗಡೆಯಾಗಿದ್ದು, ಉಳಿದ 12 ಕೋಟಿ ರೂ. ಬಿಡುಗಡೆ ಮಾಡಿಸಲು ಪ್ರಯತ್ನ ನಡೆಯುತ್ತಿದೆ ಎಂದರು.
ನಟ ಕುಮಾರ್ ಬಂಗಾರಪ್ಪ, ರಾಗಿಣಿ, ದೊಡ್ಡಣ, ಶ್ರೀನಾಥ್ ಸೇರಿ ಪ್ರಮುಖ ನಟರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಶಾಸಕ ಬಿ.ಕೆ.ಸಂಗಮೇಶ್ವರ್ ಅವರು ಸರ್ಕಾರಿ ನ್ಯಾಯಬೆಲೆ ಅಂಗಡಿ ಚಲನಚಿತ್ರದ ಬ್ಯಾನರ್ ಹಾಗೂ ಪ್ರೀಮಿಯರ್ ಶೋ ಕೂಪನ್ ಬಿಡುಗಡೆ ಮಾಡಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಮಾಪಕರ ಸಂಘದ ಮಾಜಿ ಅಧ್ಯಕ್ಷ ಭಾ.ಮ.ಹರೀಶ್, ಚಲನಚಿತ್ರ ವಿತರಕ ಚಂದ್ರು, ಪ್ರಮುಖರಾದ ಸಿದ್ದಲಿಂಗಣ್ಣ, ಸೋಮಣ್ಣ, ನಾಗೇಶ್, ಮೂರ್ತಿ ಸುದ್ದಿಗೋಷ್ಠಿಯಲ್ಲಿದ್ದರು.