ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕಾವ್ಯಾ ಹಾಗೂ ಜ್ಯೋತಿ ಅವರನ್ನು ಅಂಗವಿಕಲರ ದಿನಾಚರಣೆಯಲ್ಲಿ ಸನ್ಮಾನಿಸಲಾಯಿತು. ಎಸ್.ಎನ್.ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಬಲ್ಕಿಶ್ ಬಾನು, ಭಾರತಿ ಬಣಕಾರ್, ಸುವರ್ಣಾ ವಿ.ನಾಯ್ಕ ಇತರರಿದ್ದರು.
- ಅವಕಾಶ ದೊರೆತಲ್ಲಿ ಉನ್ನತ ಸಾಧನೆ
- ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿಕೆ
- ವಿವಿಧ ಯೋಜನೆಗಳ ಅನುಷ್ಠಾನ
ಶಿವಮೊಗ್ಗ: ಅಂಗವಿಕಲ (handicap)ರು ಬೇರೆಯವರನ್ನು ಅವಲಂಬಿಸದೆ ತಮ್ಮ ಸಾಧನೆ ಹಾದಿ ರೂಪಿಸಿಕೊಳ್ಳಬೇಕು. ಇದಕ್ಕಾಗಿ ಅವರ ಕುಟುಂಬ(family)ದೊಂದಿಗೆ ಸರ್ಕಾರ ಕೂಡ ಬೆಂಬಲ ನೀಡುತ್ತದೆ. ಅಂಗವಿಕಲರ ಕಲ್ಯಾಣಕ್ಕಾಗಿ ಸರ್ಕಾರಗಳು ಅನೇಕ ಯೋಜನೆ(plan)ಗಳನ್ನು ರೂಪಿಸಿವೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಜಿಲ್ಲಾಡಳಿತ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಅಂಗವಿಕಲರಿಗೆ ಅನುಕಂಪದ ಬದಲಿಗೆ ಅವಕಾಶ ದೊರೆತಲ್ಲಿ ಯಾವುದೆ ಸಾಧನೆ ಮಾಡಬಲ್ಲರು. ಇದನ್ನು ಅನೇಕರು ಸಾಧನೆಗಳ ಮೂಲಕ ಸಾಬೀತುಪಡಿಸಿದ್ದಾರೆ ಎಂದು ತಿಳಿಸಿದರು.
ಕ್ರಿಕೆಟ್‌ನಲ್ಲಿ ಕಾವ್ಯಾ, ಕುಸ್ತಿಯಲ್ಲಿ ಗೌರಮ್ಮ, ಥ್ರೋಬಾಲ್‌ನಲ್ಲಿ ಜ್ಯೋತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರು. ಅವಕಾಶ ಸಿಕ್ಕರೆ ಇಡೀ ಜಗತ್ತನ್ನೆ ಗೆಲ್ಲುತ್ತೇವೆ ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ತಾಯಿಗಿಂತ ದೊಡ್ಡ ಶಕ್ತಿ ಇನ್ನೊಂದಿಲ್ಲ. ಆಕೆಗೆ ಬದಲಿ ವ್ಯವಸ್ಥೆ ಇಲ್ಲ. ಅಂಗವಿಕಲ ಮಕ್ಕಳನ್ನು ಸಾಕಿ, ಸಲುಹಿ ಸಾಧನೆ ಮಾಡಲು ಮಾನಸಿಕವಾಗಿ ಸಿದ್ಧಗೊಳಿಸಿದಾಕೆ ತಾಯಿ ಎಂದರು.
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಬಲ್ಕಿಶ್ ಬಾನು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ತಹಸೀಲ್ದಾರ್ ಪ್ರದೀಪ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸುವರ್ಣಾ ವಿ.ನಾಯ್ಕ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷ ತಾಜುದ್ದೀನ್‌ಖಾನ್, ಅಂತಾರಾಷ್ಟ್ರೀಯ ಕ್ರೀಡಾಪಟುಗಳಾದ ಕಾವ್ಯಾ, ಗೌರಮ್ಮ, ಜ್ಯೋತಿ ಉಪಸ್ಥಿತರಿದ್ದರು.
ಕನಸಿಗೆ ಮಿತಿಯಿಲ್ಲ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಅಂಗವಿಕಲರ ದಿನಾಚರಣೆ ಘನತೆ ಹೆಚ್ಚಿಸಿದೆ. ದೇಹಕ್ಕೆ ವೈಫಲ್ಯ ಉಂಟಾಗಬಹುದೇ ಹೊರತು ಮನಸ್ಸಿಗಲ್ಲ. ದೇಹಕ್ಕೆ ಮಿತಿಯಿದೆ. ಆದರೆ ಕನಸಿಗಲ್ಲ. ಅದಕ್ಕೆ ಸಾಕ್ಷಿ ಕಾವ್ಯಾ ಗೌರಮ್ಮ, ಜ್ಯೋತಿ. ಮನಸ್ಸು ಮಾಡಿದರೆ ಸಾಧನೆಗೆ ಯಾವುದೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಇವರೇ ನಿದರ್ಶನ. ಕಣ್ಣಿದ್ದರೂ ಕಣ್ಣೆತ್ತಿ ನೋಡದವರು ನಿಜವಾದ ಕುರುಡರು. ಸಾಧನೆ ಮಾಡದೇ ಇರುವುದು ನಿಜವಾದ ಅಂಗವೈಕಲ್ಯ ಎಂದು ಎಂಎಲ್‌ಸಿ ಡಾ. ಧನಂಜಯ ಸರ್ಜಿ ಅಭಿಪ್ರಾಯಪಟ್ಟರು.
ಅಂಗವಿಕಲರ ಮೇಲಿನ ಅಪಾರ ಪ್ರೀತಿ ಮತ್ತು ಕಾಳಜಿ ಕಾರಣದಿಂದ 1992ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಅಂಗವಿಕಲರ ದಿನಾಚರಣೆಗೆ ನಿರ್ಧರಿಸಿತು. ಅದರಿಂದ ಅಂಗವಿಕಲರ ಕಲ್ಯಾಣಕ್ಕೆ ಬಲ ಸಿಕ್ಕಿತು. ಪ್ರಸ್ತುತ ಜಿಲ್ಲೆಯ ಮೂವರು ಮಹಿಳೆಯರು ಅಂಗವೈಕಲ್ಯ ಮೀರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಶಿವಮೊಗ್ಗಕ್ಕೆ ಕೀರ್ತಿ ತಂದಿದ್ದಾರೆ. ಅವರ ಸಾಧನೆ ಹಾದಿಯಲ್ಲಿ ಮಾನಸಿಕ ಹಾಗೂ ದೈಹಿಕ ಶಕ್ತಿ ನೀಡಿದ ಪಾಲಕರು ಹಾಗೂ ಶಿಕ್ಷಕರ ಪಾತ್ರ ದೊಡ್ಡದು. ಅಂಗವಿಕಲ ಮಕ್ಕಳ ಪಾಲನೆ ಮಾಡುವ ತಾಯಂದಿರಿಗೆ ನೀಡುವ ಗೌರವಧನ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ಎಂಎಲ್‌ಸಿ ಬಲ್ಕಿಶ್ ಬಾನು ಹೇಳಿದರು.