ಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಬೈಲಿನಲ್ಲಿ 35 ಲಕ್ಷ ರೂ. ವೆಚ್ಚದ ಕಿರುಸೇತುವೆ ನಿರ್ಮಾಣಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಭೂಮಿ ಪೂಜೆ ನೆರವೇರಿಸಿದರು. ಗ್ರಾಪಂ ಅಧ್ಯಕ್ಷೆ ನಾಗರತ್ನ, ಗ್ರಾಮಸ್ಥರು ಇದ್ದರು. 
ಶಿವಮೊಗ್ಗ

ಬಗರ್‌ಹುಕುಂ ರೈತರಿಗೆ ಸಿಹಿ ಸುದ್ದಿ | Development work

ರಿಪ್ಪನ್‌ಪೇಟೆ: ರಾಜ್ಯ ಸರ್ಕಾರದ ಹಲವು ಇಲಾಖೆಗಳಿಂದ 5 ಕೋಟಿ ರೂ. ಅನುದಾನದಲ್ಲಿ ಬೆಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಬೆಳ್ಳೂರಿನ ಮತ್ತಿಕೊಪ್ಪ, ಗುಳಗುಳಿ ಶಂಕರ ಗ್ರಾಮಗಳ ರಸ್ತೆ, ದೋಬೈಲು ಗ್ರಾಮದಲ್ಲಿ ಕಾಲುಸಂಕ, ಮಸ್ಕಾನಿಯಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಇಲ್ಲಿನ ಜನರ ಬೇಡಿಕೆಯಂತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಇನ್ನೊಂದಿಷ್ಟು ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದೀರಿ. ಹಂತಹಂತವಾಗಿ ಪರಿಹರಿಸುತ್ತೇನೆ ಎಂದರು.
ನಿಮ್ಮೆಲ್ಲರ ಆಶೀರ್ವಾದದಿಂದ ಮೂರು ಬಾರಿ ಶಾಸಕನಾಗಿದ್ದೇನೆ. ರಾಜಕಾರಣದಲ್ಲಿ ಜನರನ್ನು ಪ್ರೀತಿಸುವುದು ಬಂಗಾರಪ್ಪ ಅವರಿಂದ, ಅಭಿವೃದ್ಧಿ ಹೇಗೆ ಮಾಡಬೇಕೆಂಬುದನ್ನು ಕಾಗೋಡು ತಿಮ್ಮಪ್ಪ ಅವರಿಂದ ಕಲಿತಿದ್ದೇನೆ ಎಂದು ಹೇಳಿದರು.
 ಬೆಳ್ಳೂರು ಗ್ರಾಪಂನಲ್ಲಿ ಹೆಚ್ಚು ಅರಣ್ಯ ಸಮಸ್ಯೆಗಳಿವೆ. ಈ ಭಾಗದ ರೈತರಿಗೆ ಅರಣ್ಯ ಬಗರ್‌ಹುಕುಂ ಸಮಸ್ಯೆ ಒಂದೆಡೆಯಾದರೆ, ಆನೆ, ಕಾಡುಕೋಣಗಳ ಉಪಟಳ ಜಾಸ್ತಿಯಾಗಿದೆ. ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿಶೇಷ ಆಸಕ್ತಿಯನ್ನು ಹೊಂದಿದ್ದು ಸರ್ಕಾರದ ಅಧಿಕಾರಿಗಳ ಮಟ್ಟದಲ್ಲಿ ಸರಣಿ ಸಭೆಗಳನ್ನು ಮಾಡಿ ಸುಪ್ರೀಂ ಕೋರ್ಟ್‌ನಲ್ಲಿ ರೈತರ ಪರವಾದ ಸಮರ್ಥ ವಾದ ಮಂಡನೆಗೆ ಯೋಜಿಸಿದ್ದಾರೆ. ನಿಮ್ಮ ಜತೆಗೆ ನಾವಿದ್ದೇವೆ. ರೈತರಿಗೆ ಕಿರುಕುಳ ನೀಡಿದಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಗ್ರಾಪಂ ಅಧ್ಯಕ್ಷೆ ನಾಗರತ್ನ ಇತರರಿದ್ದರು.