ಚಂದ್ರಗುತ್ತಿ ರೇಣುಕಾಂಬೆ ದೇಗುಲದ ಕಾಣಿಕೆ ಹಣ ಎಣಿಕೆ ಮಾಡುತ್ತಿರುವುದು.
- ಭದ್ರತಾ ವ್ಯವಸ್ಥೆ ಉನ್ನತೀಕರಣಕ್ಕೆ ಆದ್ಯತೆ
- ಎ, ಬಿ ಶ್ರೇಣಿ ಮಂದಿರಗಳಿಗೆ ಪ್ರಾಶಸ್ತ್ಯ
- ಅತಿ ಹೆಚ್ಚು ಆದಾಯ ನೀಡುವ ಹಣಗೆರೆಯಲ್ಲಿ ಪರಿವರ್ತನೆಗೆ ಒತ್ತು
- ಮೂಲ ಸೌಕರ್ಯ ಒದಗಿಸದೆ ಆದಾಯದ ಮೇಲೆ ಕಣ್ಣಿಟ್ಟ ಸರ್ಕಾರ
ಮುಜರಾಯಿ ದೇವಸ್ಥಾನಗಳ (temples) ಹುಂಡಿ ಹಣ, ಬೆಳ್ಳಿ, ಬಂಗಾರದ ವಸ್ತುಗಳ ರಕ್ಷಣೆಗೆ ಮುಂದಾಗಿರುವ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು (sop) ಪ್ರಕಟಿಸಿದ ಬೆನ್ನಲ್ಲೇ ಶಿವಮೊಗ್ಗ ಜಿಲ್ಲಾಡಳಿತ ದೇವರ (god) ಕೆಲಸಕ್ಕೆ ಆದ್ಯತೆ ನೀಡಿದೆ. ಜಿಲ್ಲೆಯಲ್ಲಿರುವ ಎ ಹಾಗೂ ಬಿ ಶ್ರೇಣಿಯ ತಲಾ ನಾಲ್ಕು ದೇವಸ್ಥಾನಗಳ ಭದ್ರತಾ ವ್ಯವಸ್ಥೆ ಉನ್ನತೀಕರಿಸಲು ಮುಂದಾಗಿದೆ.
ಜಿಲ್ಲೆಯಲ್ಲಿ ಅತಿ ಹೆಚ್ಚು ಆದಾಯ ಹೊಂದಿರುವ ಹಣಗೆರೆಯ ಹಜರತ್ ಸೈಯದ್ ಸಾದತ್ ದರ್ಗಾ ಹಾಗೂ ಭೂತರಾಯ ಚೌಡೇಶ್ವರಿ ದೇವಾಲಯ, ಚಂದ್ರಗುತ್ತಿಯ ರೇಣುಕಾಂಬ ಮುಂತಾದ ದೇವಾಲಯಗಳಲ್ಲಿ ಇರುವ ವ್ಯವಸ್ಥೆಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ಕಾರ್ಯತತ್ಪರವಾಗಿದೆ.
ಚುನಾವಣೆಗಳ ಸಂದರ್ಭದಲ್ಲಿ ವಾರ್ ರೂಂ ರಚಿಸಿದಂತೆ ದೇವಾಲಯಗಳಲ್ಲಿ ನಡೆಯುವ ಚಟುವಟಿಕೆ, ಅದರಲ್ಲೂ ಹುಂಡಿ ಹಣ ಎಣಿಕೆ ಸಂದರ್ಭದಲ್ಲಿ ವೆಬ್‌ಕಾಸ್ಟಿಂಗ್ ಮಾಡಲಾಗುತ್ತದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಯಿಂದಲೇ ಅದನ್ನು ನೇರವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಈಗಾಗಲೇ ಅಳವಡಿಕೆಯಾಗಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಅವುಗಳಲ್ಲಿ ತಾಂತ್ರಿಕ ಸಮಸ್ಯೆಗಳಿದ್ದರೆ ಬದಲಾಯಿಸಿ ಹೆಚ್ಚು ಕ್ಷಮತೆಯುಳ್ಳ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ. ದೇವಾಲಯಗಳಲ್ಲಿ ನಡೆಯುವ ಹೋಮ ಹವನ, ಮಂಗಳಾರತಿ ಸಮಯದಲ್ಲಿ ಹೊಗೆಯು ಕ್ಯಾಮರಾಗಳನ್ನು ಆವರಿಸಿಕೊಳ್ಳುವುದರಿಂದ ದೃಶ್ಯಗಳು ಸರಿಯಾಗಿ ಸೆರೆಯಾಗುವುದಿಲ್ಲ. ಹೀಗಾಗಿ ಸಕಾಲದಲ್ಲಿ ಅವುಗಳ ಸೂಕ್ತ ನಿರ್ವಹಣೆಗೂ ಆದ್ಯತೆ ನೀಡಲಾಗುತ್ತದೆ.
ಇದುವರೆಗೆ ಜಿಲ್ಲೆಯ ಎ ಹಾಗೂ ಬಿ ಶ್ರೇಣಿಯ ದೇವಸ್ಥಾನಗಳಲ್ಲಿ ಮೂರು ತಿಂಗಳಿಗೊಮ್ಮೆ ಹುಂಡಿ ಹಣ ಎಣಿಕೆ ಮಾಡಲಾಗುತ್ತಿತ್ತು. ಇನ್ನು ಮುಂದೆ ವಾರ ಅಥವಾ ಎರಡು ವಾರಗಳಿಗೊಮ್ಮೆ ಕಾಣಿಕೆ ಹಣ ಎಣಿಕೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಜಾತ್ರೆ ಇಲ್ಲವೇ ವಿಶೇಷ ದಿನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಕಾಣಿಕೆ ಸಂಗ್ರಹವೂ ಹೆಚ್ಚಿರುತ್ತದೆ. ಹೀಗಾಗಿ ಎಣಿಕೆಗೆ ಮೂರು ತಿಂಗಳ ಗಡುವನ್ನು ತೆರವು ಮಾಡಿದ್ದು, ಹೆಚ್ಚು ದಿನ ಹುಂಡಿಯಲ್ಲಿ ಹಣ ಇರಿಸದಂತೆ ಎಚ್ಚರಿಕೆ ವಹಿಸಲಾಗುತ್ತದೆ.
ಈಗಾಗಲೇ ಎ ಹಾಗೂ ಬಿ ಶ್ರೇಣಿಯ ದೇವಸ್ಥಾನಗಳಲ್ಲಿ ಡಿಜಿಟಲ್ ಕಾಣಿಕೆಗೆ ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ಆದರೆ ನೆಟ್‌ವರ್ಕ್ ಸಮಸ್ಯೆಯಿದೆ. ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಅಳವಡಿಕೆಗೂ ನಿರಂತರ ವಿದ್ಯುತ್ ಸಂಪರ್ಕ ಹಾಗೂ ನೆಟ್‌ವರ್ಕ್ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಜಿಲ್ಲಾಡಳಿತ ಈಗ ಮುಂದಾಗಿದೆ. ಮೆಸ್ಕಾಂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಆ ವ್ಯಾಪ್ತಿಯ ಮೊಬೈಲ್ ಟವರ್‌ಗಳ ಕಾರ್ಯಕ್ಷಮತೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.
ಹಣಗೆರೆಯಲ್ಲಿ ಸಮಸ್ಯೆಯಾಗಿತ್ತು
ಜಿಲ್ಲೆಯ ಎ ಹಾಗೂ ಬಿ ಶ್ರೇಣಿಯ ದೇವಸ್ಥಾನಗಳ ಕಾಣಿಕೆ ಹಣ ಎಣಿಸುವ ಸಂದರ್ಭದಲ್ಲಿ ಕೆಲವರು ಕೈಚಳಕ ತೋರಿದ ಕೆಲವು ಘಟನೆಗಳು ಬೆಳಕಿಗೆ ಬಂದಿವೆ. ಇನ್ನು ಕೆಲವು ಬಂದಿಲ್ಲ. ಎರಡು ವರ್ಷಗಳ ಹಿಂದೆ ಹಣಗೆರೆಯಲ್ಲಿ ಕಾಣಿಕೆ ಹಣ ಎಣಿಕೆ ಸಂದರ್ಭದಲ್ಲಿ ಗೋಲ್‌ಮಾಲ್ ನಡೆದಿದ್ದನ್ನು ತಹಸೀಲ್ದಾರ್ ರಂಜಿತ್ ಪತ್ತೆ ಮಾಡಿದ್ದರು. ಮರು ಎಣಿಕೆಯಲ್ಲಿ ಹಣವೇನೋ ಸಿಕ್ಕಿತು. ಆದರೆ ಆರೋಪಿಯ ಸುಳಿವು ದೊರೆಯಲೇ ಇಲ್ಲ. ಜಿಲ್ಲಾಡಳಿತ ವೆಬ್‌ಕಾಸ್ಟಿಂಗ್ ಸೇರಿ ಯಾವುದೇ ಸೂಕ್ಷ್ಮ ವ್ಯವಸ್ಥೆ ಅಳವಡಿಸಿಕೊಂಡರೂ ದೇವಸ್ಥಾನದಲ್ಲಿ ಪ್ರಾಮಾಣಿಕ ಸಿಬ್ಬಂದಿ ನೇಮಕವಾಗುವವರೆಗೂ ಸಂಪೂರ್ಣ ಅಕ್ರಮ ತಡೆಯುವುದು ಕಷ್ಟಸಾಧ್ಯ.
ಎರಡು ಕೋಟಿ ರೂ. ಮೀರಿದ ಆದಾಯ
ಜಿಲ್ಲೆಯಲ್ಲಿ ಅತಿ ಹೆಚ್ಚು ಆದಾಯ ಹೊಂದಿರುವುದು ಹಣಗೆರೆ ಕಟ್ಟೆಯ ಭೂತರಾಯ ಸ್ವಾಮಿ. ಇಲ್ಲಿ ವಾರ್ಷಿಕ ಆದಾಯ ಎರಡು ಕೋಟಿ ರೂ. ಮೀರಿದೆ. ಚಂದ್ರಗುತ್ತಿಯ ರೇಣುಕಾಂಬೆ ಸನ್ನಿಧಿಯೂ ಉತ್ತಮ ಆದಾಯವಿರುವ ಕ್ಷೇತ್ರವಾಗಿದೆ. ಇಲ್ಲಿ ಹಣದ ಜತೆಗೆ ಚಿನ್ನಾಭರಣಗಳನ್ನೂ ಒಪ್ಪಿಸುವ ಪದ್ಧತಿ ಹೆಚ್ಚು ಪ್ರಚಲಿತದಲ್ಲಿದೆ. ಇನ್ನು ಮುಂದಿನ ದಿನಗಳಲ್ಲಿ ಎ ಹಾಗೂ ಬಿ ಶ್ರೇಣಿ ದೇವಸ್ಥಾನಗಳ ಹುಂಡಿ ಹಣ ಎಣಿಕೆ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳ ಉಪಸ್ಥಿತಿ ಕಡ್ಡಾಯವಾಗಿರಲಿದೆ.
ದೇವರಿಗೆ ಸ್ವಂತ ನೆಲೆಯಿಲ್ಲ
ಹಣಗೆರೆ ಕಟ್ಟೆಯ ಭೂತರಾಯ ಸ್ವಾಮಿ ಹಾಗೂ ಚಂದ್ರಗುತ್ತಿ ದೇವಸ್ಥಾನಗಳಿರುವುದು ಅರಣ್ಯ ಇಲಾಖೆ ಜಾಗದಲ್ಲಿ. ಹಣಗೆರೆ ಕಟ್ಟೆಯಲ್ಲಿ ವಾಹನ ನಿಲುಗಡೆಯೇ ದೊಡ್ಡ ಸಮಸ್ಯೆ. ಆ ಭೂಮಿಯನ್ನು ಅರಣ್ಯ ಇಲಾಖೆಯಿಂದ ಪಡೆದುಕೊಳ್ಳುವುದು ಇನ್ನೂ ಮುಜರಾಯಿ ಇಲಾಖೆಗೆ ಸಾಧ್ಯವಾಗಿಲ್ಲ. ಚಂದ್ರಗುತ್ತಿಯ ದೇವಸ್ಥಾನ ಪ್ರಾಚ್ಯವಸ್ತು ಇಲಾಖೆ ವ್ಯಾಪ್ತಿಗೆ ಸೇರಿದರೆ ದೇವಸ್ಥಾನದ ಸುತ್ತಲಿನ ಜಾಗ ಅರಣ್ಯ ಇಲಾಖೆಯದು. ದೇವಾಲಯದ ಅಭಿವೃದ್ಧಿಗಾಗಿ ಪ್ರಾಚ್ಯವಸ್ತು ಇಲಾಖೆಗೆ 2.84 ಕೋಟಿ ರೂ. ಮಂಜೂರು ಮಾಡಿರುವ ಜಿಲ್ಲಾಡಳಿತ, 10 ಎಕರೆ ಅರಣ್ಯ ಪ್ರದೇಶವನ್ನು ದೇವಾಲಯಕ್ಕೆ ಪಡೆದು ಬದಲಿಗೆ 20 ಎಕರೆ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಇ-ಪರಿವೇಶ್‌ನಲ್ಲಿ ನೋಂದಣಿ ಮಾಡಿದೆ. ದೇವರಿಗೆ ಸ್ವಂತ ನೆಲೆ ಕಲ್ಪಿಸುವ ಕಾರ್ಯಕ್ಕೆ ಇನ್ನಷ್ಟು ಶಕ್ತಿ ದೊರೆಯಬೇಕಿದೆ.
ಎ ಶ್ರೇಣಿ ದೇಗುಲಗಳು
ಹಣಗೆರೆ ಕಟ್ಟೆಯ ಭೂತರಾಯ ಸ್ವಾಮಿ
ಶಿಕಾರಿಪುರದ ಹುಚ್ಚುರಾಯಸ್ವಾಮಿ
ಬಿ ಶ್ರೇಣಿ ಮಂದಿರಗಳು
ಶಿವಮೊಗ್ಗ ಕೋಟೆ ಸೀತಾರಾಮಾಂಜನೇಯ
ಭದ್ರಾವತಿಯ ಲಕ್ಷ್ಮೀನರಸಿಂಹ ಸ್ವಾಮಿ
ಮೃಗವಧೆಯ ಮಲ್ಲಿಕಾರ್ಜುನ ಸ್ವಾಮಿ
ತೊಗರ್ಸಿಯ ಮಲ್ಲಿಕಾರ್ಜುನ ಸ್ವಾಮಿ
ದೇವಾಲಯಗಳ ವರ್ಗೀಕರಣ ಹೇಗೆ?
ಎ ಗ್ರೇಡ್: ವಾರ್ಷಿಕ ಗರಿಷ್ಠ 25 ಲಕ್ಷ ರೂ. ಮೇಲ್ಪಟ್ಟು ಆದಾಯ
ಬಿ ಗ್ರೇಡ್: ಐದು ಲಕ್ಷದಿಂದ 25 ಲಕ್ಷ ರೂ.ವರೆಗೆ ಆದಾಯ
ಸಿ ಗ್ರೇಡ್: ವಾರ್ಷಿಕ ಗರಿಷ್ಠ ಐದು ಲಕ್ಷ ರೂ. ಆದಾಯ
"
ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿ ಪ್ರಕಾರ ಜಿಲ್ಲೆಯ ಎ ಹಾಗೂ ಬಿ ಶ್ರೇಣಿಯ ದೇವಸ್ಥಾನಗಳಲ್ಲಿ ಅಗತ್ಯ ಬದಲಾವಣೆ ಮಾಡಲಾಗುವುದು. ಈ ಹಿಂದೆಯೇ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಇದನ್ನು ಇನ್ನಷ್ಟು ಉನ್ನತೀಕರಿಸಲಾಗುವುದು. ಮುಖ್ಯವಾಗಿ ಹುಂಡಿ ಹಣ ಎಣಿಕೆಯಲ್ಲಿ ಯಾವುದೇ ಲೋಪವಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ.
— ಆರ್.ಪ್ರದೀಪ್ ಮುಜರಾಯಿ ಇಲಾಖೆ ತಹಸೀಲ್ದಾರ್