ಕಲ್ಲೂರು ಮೇಘರಾಜ್, ರಾಜ್ಯ ಭೂವಿದ್ಯಾದಾನ ಶಾಲಾ ಜಮೀನು ಗೇಣಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ
- ಸಮಸ್ಯೆಗಳ ಅಧ್ಯಯನಕ್ಕೆ ಸಮಿತಿ ರಚಿಸಿ
- ಸರ್ಕಾರಕ್ಕೆ ಕಲ್ಲೂರು ಮೇಘರಾಜ್ ಆಗ್ರಹ
ಶಿವಮೊಗ್ಗ: ರಾಜ್ಯದಲ್ಲಿ 1955-56ರಲ್ಲಿ ಜಾರಿಗೆ ಬಂದ ಭೂ ವಿದ್ಯಾದಾನದ ಶಾಲಾ (school) ಜಮೀನುಗಳ ಗೇಣಿದಾರರ ಸಮಸ್ಯೆಗಳನ್ನು ಅಧ್ಯಯನ ಮಾಡಲು ಸರ್ಕಾರ ಸಮಿತಿ (comitee) ರಚನೆ ಮಾಡಬೇಕು ಎಂದು ರಾಜ್ಯ ಭೂವಿದ್ಯಾದಾನ ಶಾಲಾ ಜಮೀನು (land) ಗೇಣಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಕಲ್ಲೂರು ಮೇಘರಾಜ್ ಒತ್ತಾಯಿಸಿದರು.
ಶಾಲಾ ಜಮೀನು ಸಾಗುವಳಿದಾರರ ಸಮಸ್ಯೆ ಹಲವು ವರ್ಷಗಳಿಂದಿದೆ. ಸುಮಾರು 70 ವರ್ಷಗಳಿಂದ ಸಾವಿರಾರು ರೈತರು ಗೇಣಿ ಜಮೀನು ಉಳುಮೆ ಮಾಡುತ್ತಿದ್ದಾರೆ. ಉಳುವವನೇ ಹೊಲದೊಡೆಯ ಎಂಬ ಕಾನೂನಿನ ಅಂಶ ಇವರಿಗೆ ಅನ್ವಯವಾಗಿಲ್ಲ. ಭೂ ಒಡೆತನ ಸಿಕ್ಕಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ನಮ್ಮ ಸಮಿತಿಯು ಕಳೆದ 30 ವರ್ಷಗಳಿಂದ ಗೇಣಿ ರೈತರ ಪರವಾಗಿ ಹೋರಾಟ ನಡೆಸುತ್ತಲೇ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಸಮಸ್ಯೆಗೆ ಸ್ಪಂದಿಸಿದ್ದರು. ಆದರೆ ಈಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಮಾತು ಕೇಳಿಕೊಂಡು ಶಾಲಾ ಸ್ವತ್ತು ಸಂರಕ್ಷಣಾ ಕಾಯ್ದೆ ಜಾರಿಗೆ ತರಲಾಗಿದೆ. ಇದರಿಂದ ಶಾಲಾ ಜಮೀನು ಗೇಣಿ ಕುಟುಂಬಗಳು ಒಕ್ಕಲೇಳುವ ಭೀತಿಯಲ್ಲಿವೆ ಎಂದರು.
ಸಿಎಂ ಶಿವಮೊಗ್ಗ ಭೇಟಿ ವೇಳೆ ಉಳುವವನೇ ಹೊಲದೊಡೆಯ ಎಂಬ ಸಿದ್ಧಾಂತದಡಿ ಶಾಲಾ ಜಮೀನು ಗೇಣಿದಾರರಿಗೆ ಭೂಒಡೆತನದ ಹಕ್ಕು ನೀಡುವಂತೆ ಒತ್ತಾಯಿಸಲಾಗುವುದು. ಶಾಲಾ ಜಮೀನು ಗೇಣಿದಾರರ ಸಮಸ್ಯೆಗಳನ್ನು ಅಧ್ಯಯನ ಮಾಡಲು ಅನುಕೂಲವಾಗುವಂತೆ ಹಿರಿಯ ಸಾಹಿತಿಗಳಾದ ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರನ್ನೊಳಗೊಂಡ ಸಮಿತಿಯನ್ನು ಸರ್ಕಾರ ರಚಿಸಿ, ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಹೋರಾಟ ಸಮಿತಿ ಪ್ರಮುಖರಾದ ಎಚ್.ಎಂ.ಸಂಗಯ್ಯ, ಪಿ.ಡಿ.ಮಂಜಪ್ಪ, ಲೋಕೇಶ್, ಭೈರಪ್ಪ, ಮಂಜಪ್ಪ, ಶಂಕ್ರಾನಾಯ್ಕ, ಕರಿಬಸಪ್ಪ, ಮಲ್ಲೇಶಪ್ಪ ಸುದ್ದಿಗೋಷ್ಠಿಯಲ್ಲಿದ್ದರು.