ಶುಂಠಿ ಗಿಡದ ಎಲೆಯ ಬೆಂಕಿ ರೋಗದ ಚಿಹ್ನೆ ಕಾಣಸಿಕೊಂಡಿರುವುದು. 
ಶಿವಮೊಗ್ಗ

ಶುಂಠಿ ಬೆಳೆಗಾರರಿಗೆ ಬೆಂಕಿ ರೋಗದ ಬಿಸಿ I ginger growers

ಪ್ರಮುಖ ಮುಖ್ಯಾಂಶಗಳು

  • ಕಳೆದ ವರ್ಷ ಕೈ ಸುಟ್ಟುಕೊಂಡಿದ್ದ ರೈತರಿಗೆ ಮತ್ತೆ ಆತಂಕ
  • ಪ್ರತಿಕೂಲ ಹವಾಮಾನದಿಂದ ಸಮಸ್ಯೆ
  • ಸಾಗರ, ಸೊರಬದಲ್ಲಿ ಹೆಚ್ಚಿದ ಕಾಯಿಲೆ

ಅರವಿಂದ ಅಕ್ಲಾಪುರ ಶಿವಮೊಗ್ಗ

ಒಂದೆಡೆ ಮಳೆ ಕೈಕೊಟ್ಟಿದೆ. ಇನ್ನೊಂದೆಡೆ ಇರುವ ಫಸಲನ್ನು ಉಳಿಸಿಕೊಳ್ಳಲು ಬೆಳೆಗೆ ತಗುಲುವ ರೋಗಗಳೇ ಸವಾಲಾಗಿ ಪರಿಣಮಿಸಿವೆ. ಕೈಕೊಟ್ಟ ಮಳೆಯ ಕಾರಣದಿಂದ ಭತ್ತದ ಬಿತ್ತನೆ ತೀವ್ರ ಕುಂಠಿತವಾಗಿದೆ. ಮತ್ತೊಂದೆಡೆ ಮೆಕ್ಕೆಜೋಳಕ್ಕೆ ಲದ್ದಿ ಹುಳು ಕಾಟ ಜೋರಾಗಿದೆ. ಇದೀಗ ಶುಂಠಿ (ginger) ಬೆಳೆಯಲ್ಲಿ ಬೆಂಕಿ ರೋಗ ಕಾಣಿಸಿಕೊಂಡಿದ್ದು ಮಲೆನಾಡಿನ (malenadu) ಶುಂಠಿ ಬೆಳೆಗಾರರು (growers) ಕಂಗಾಲಾಗಿದ್ದಾರೆ.
ಈ ಹಿಂದೆ ಶುಂಠಿಗೆ ಗಡ್ಡೆ ಕೊಳೆ ರೋಗವು ತೀವ್ರವಾಗಿತ್ತು. ಈಗ ಕೆಲವು ವರ್ಷಗಳಿಂದ ಭತ್ತ ಹಾಗೂ ಮೆಕ್ಕೆಜೋಳದಲ್ಲಿ ಕಾಣಿಸಿಕೊಳ್ಳುವ ಬೆಂಕಿ ರೋಗ ಶುಂಠಿಯನ್ನೂ ಆಕ್ರಮಿಸಿಕೊಂಡಿದೆ. ಕಳೆದ ವರ್ಷ ಜಿಲ್ಲೆಯ ಬಹುಪಾಲು ಭಾಗದಲ್ಲಿ ಶುಂಠಿಯನ್ನು ಆಪೋಷನ ತೆಗೆದುಕೊಂಡಿದ್ದ ಈ ರೋಗ ಮತ್ತೆ ಮರುಕಳಿಸಿದೆ.
ಕಳೆದ ವರ್ಷ ಗಡ್ಡೆಗಳು ಬಲಿತ ಮೇಲೆ ರೋಗಾಣುಗಳು ಬಾಧಿಸಿದ್ದರಿಂದ ಗಿಡಗಳು ಮಾತ್ರ ಒಣಗಿದ್ದವು. ಗಡ್ಡೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರೋಗದಿಂದ ಹಾನಿಯಾಗಿರಲಿಲ್ಲ. ಈ ವರ್ಷ ಶುಂಠಿ ಬೆಳೆಯು ಪ್ರಾರಂಭದ ಹಂತದಲ್ಲಿಯೇ ರೋಗಾಣುಗಳ ತೀವ್ರತೆಗೆ ತುತ್ತಾಗಿ ಗಿಡಗಳು ಒಣಗತೊಡಗಿವೆ.
ಶುಂಠಿಗೆ ಸಾಮಾನ್ಯವಾಗಿ ದುಂಡಾಣು ಎಲೆ ಮಚ್ಚೆ ರೋಗ, ಫ್ರಾಕ್ಷಿ ಪೈರಿಕ್ಯುಲೇರಿಯಾ ಬೆಂಕಿ ರೋಗ ಮತ್ತು ಕೊಲೆಟೋಟ್ರೆಕೊಮ್ ಎಲೆ ಚುಕ್ಕೆ ರೋಗ ಕಂಡು ಬರುತ್ತದೆ. ಈ ಮೂರು ರೋಗಗಳು ಶುಂಠಿಗೆ ತೀವ್ರ ಹಾನಿಯನ್ನುಂಟು ಮಾಡುತ್ತಿವೆ. ಕಡಿಮೆ ಉಷ್ಣಾಂಶ ಇರುವುದರಿಂದ ರೋಗ ಬೇಗ ಹರಡಿ, ಬೆಳೆಗೆ ಹಾನಿಯನ್ನುಂಟು ಮಾಡುತ್ತಿವೆ.
ದುಂಡಾಣು ಎಲೆ ಮಚ್ಚೆ ರೋಗದಲ್ಲಿ, ಎಲೆ ಮತ್ತು ಕಾಂಡದ ಮೇಲೆ ನೀರಿನಿಂದ ಆವೃತವಾದ ಮಚ್ಚೆಗಳು ಬೆಳವಣಿಗೆಯಾಗುತ್ತವೆ. ನಂತರ ಎಲೆಗಳು ಸುಟ್ಟ ರೀತಿ ಕಾಣಿಸುತ್ತವೆ. ಬೆಂಕಿ ರೋಗದಲ್ಲಿ ಆಲಿವ್ ಬಣ್ಣದ ರೀತಿ ಎಲೆ ಮತ್ತು ಕಾಂಡದ ಮೇಲೆ ಮಚ್ಚೆ ಪ್ರಾರಂಭವಾಗುತ್ತವೆ. ನಂತರ ವಜ್ರಾಕಾರವನ್ನು ಪಡೆಯುತ್ತದೆ. ಬಳಿಕ ಎಲೆಗಳು ಸುಟ್ಟ ರೀತಿ ಕಾಣುತ್ತವೆ. ಎಲೆಚುಕ್ಕೆ ರೋಗದಲ್ಲಿ ಸಣ್ಣದಾಗಿ ಚುಕ್ಕಿ ಕಾಣಿಸಿಕೊಂಡು, ಮುಂದೆ ತಿಳಿ ಹಳದಿ ಬಣ್ಣದಿಂದ ಆವೃತವಾಗಿ ಎಲೆಯನ್ನು ಹಾಗೂ ಕಾಂಡವನ್ನು ಸುಡುತ್ತವೆ.

ಹವಾಮಾನ ಬದಲಾವಣೆ ಕಾರಣ

ಶಿಲೀಂಧ್ರಗಳು ಮತ್ತು ದುಂಡಾಣುವಿನ ರೋಗಾಣುಗಳು ಗಾಳಿಯ ಮುಖಾಂತರ, ಮಳೆಯ ಹನಿಯ ಜತೆಗೆ ಇತರ ಗಿಡಗಳಿಗೂ ಹರಡುತ್ತದೆ. ಶೇ.80-95ರಷ್ಟು ತೇವಾಂಶ, ರಾತ್ರಿ ವೇಳೆ 15-22 ಡಿಗ್ರಿ ಸೆಲ್ಸಿಯಸ್‌ನಷ್ಟು ತಗ್ಗುವ ಉಷ್ಣಾಂಶ, ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುವ ಸಾರಜನಕ ಗೊಬ್ಬರ ಬೆಂಕಿ ರೋಗಕ್ಕೆ ಪ್ರಮುಖ ಕಾರಣವಾಗಿದೆ. ಬೆಳಗ್ಗೆ ಇಬ್ಬನಿಯ ವಾತಾವರಣ, ದಿನವಿಡೀ ಮೋಡ ಕವಿದಿರುವುದು, ಶುಂಠಿಯ ಸಾಲುಗಳ ನಡುವಿನ ಕಡಿಮೆ ಅಂತರ, ಹೆಚ್ಚು ಮಳೆ, ಆಗಾಗ ಬೀಳುವ ಮಳೆಯೂ ಶುಂಠಿಯ ರೋಗ ಹೆಚ್ಚಳಕ್ಕೆ ಕಾರಣವಾಗಿದೆ. ಒಟ್ಟಾರೆಯಾಗಿ ಬದಲಾದ ಹವಾಮಾನ ಶುಂಠಿ ಬೆಳೆಗಾರರಿಗೆ ಶಾಪವಾಗಿ ಪರಿಣಮಿಸಿದೆ.

ಮಳೆ ಕಡಿಮೆಯಿದ್ದರೂ ರೋಗವೇಕೆ?

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿಲ್ಲ. ಆದರೂ ಬೆಂಕಿ ರೋಗ ಕಾಣಿಸಿಕೊಂಡಿರುವುದು ಕೆಲವರಲ್ಲಿ ಅಚ್ಚರಿ ಮೂಡಿಸಿದೆ. ಆದರೆ ಕಳೆದ ವರ್ಷ ಮೇ ತಿಂಗಳಿಂದಲೇ ಮಳೆ ಕಾಣಿಸಿಕೊಂಡ ಪರಿಣಾಮ ಬೆಂಕಿ ರೋಗ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಕಾಣಿಸಿಕೊಂಡಿತ್ತು. ರೋಗದ ಹತೋಟಿಗೆ ಬೆಳೆಗಾರರು ಇನ್ನಿಲ್ಲದ ಹರಸಾಹ ನಡೆಸಿದ್ದರು. ಆಗ ಮಣ್ಣಿನಲ್ಲಿ ಹಾಗೂ ಪರಿಸರದಲ್ಲಿ ಉಳಿದುಕೊಂಡಿದ್ದ ರೋಗದ ಜೀವಾಣುಗಳು ಈಗ ಅಲ್ಪ ಪ್ರಮಾಣದ ಮಳೆಗೆ ಮತ್ತೆ ಜೀವ ಪಡೆದುಕೊಂಡಿವೆ. ಬೆಂಕಿ ರೋಗದ ತೀವ್ರತೆ ಹೇಗಿರುತ್ತದೆಯೆಂದರೆ 4-6 ತಾಸುಗಳಲ್ಲಿ ಇಡೀ ತಾಕನ್ನು ಇದು ಆವರಿಸಿಕೊಳ್ಳಬಲ್ಲದು.
ರೋಗದ ಪರಿಣಾಮವೇನು?
ಕಳೆದ ವರ್ಷ ಶುಂಠಿ ಕೀಳಲು ಕೆಲ ದಿನಗಳಿರುವಾಗ ಬೆಂಕಿ ರೋಗ ಕಾಣಿಸಿಕೊಂಡಿತ್ತು. ಇದರಿಂದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದ್ದವು. ಆದರೆ ಗಡ್ಡೆಗೆ ರೋಗ ತಗುಲಿರಲಿಲ್ಲ. ಆದರೆ ಈಗ ಶುಂಠಿ ನಾಟಿಯಾದ ಒಂದೆರಡು ತಿಂಗಳಲ್ಲೇ ಇದು ಕಾಣಿಸಿಕೊಂಡಿದೆ. ಈ ರೋಗ ಕಾಣಿಸಿಕೊಂಡರೆ ಎಲೆಗಳು ಹಸಿರು ಬಣ್ಣವನ್ನು ಕಳೆದುಕೊಳ್ಳಲಿವೆ. ಇದರಿಂದ ಅವು ಆಹಾರ ಉತ್ಪಾದನೆ ಮಾಡುವುದಿಲ್ಲ. ಹೊಸದಾಗಿ ಕಾಂಡ ಬೆಳೆಯುವುದಿಲ್ಲ. ಗಡ್ಡೆಯ ಬೆಳವಣಿಗೆಗೆ ಇದು ಮಾರಕವಾಗಲಿದೆ.
ಪರಿಹಾರ ಕ್ರಮಗಳೇನು?
ತಾಕಿನಲ್ಲಿ ನೀರು ನಿಲ್ಲದ ಹಾಗೆ ಬಸಿಗಾಲುವೆಗಳನ್ನು ಸರಿಪಡಿಸಬೇಕು. ರೋಗ ಬಾಧಿತ ತಾಕುಗಳಿಗೆ ಪ್ರೋಪಿಕೋನಾಜೋಲ್ 25 ಇಸಿ 1 ಮಿಲೀಯನ್ನು ಪ್ರತಿ ಲೀಟರ್ ನೀರಿಗೆ ಅಥವಾ ಹೆಕ್ಸಾಕೋನಾಝೋಲ್ 5 ಇಸಿ 1 ಮಿಲೀ ಪ್ರತಿ ಲೀಟರ್ ನೀರಿಗೆ ಅಂತರ ವ್ಯಾಪ್ತಿ ಶಿಲೀಂಧ್ರ ನಾಶಕವನ್ನು ಸಿಂಪಡಿಸಬೇಕು. ಅಥವಾ ಕರ‌್ಬೆಂಡೈಜಿಂ ಶೇ. 12+ ಮ್ಯಾಂಕೋಜೆಬ್ ಶೇ.63 (2.5 ಗ್ರಾಂ ಪ್ರತೀ ಲೀಟರ್ ನೀರಿಗೆ) 8-10 ದಿನಗಳ ಅಂತರದಲ್ಲಿ ಗುಣಮಟ್ಟದ ಅಂಟು ಬೆರೆಸಿ ಸಿಂಪಡಿಸಬೇಕು.
"

ಎಲೆಗಳು ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗಿದರೆ ಗಡ್ಡೆಯ ಬೆಳವಣಿಗೆ ಸ್ಥಗಿತವಾಗುತ್ತದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸಬೇಕು. ಭತ್ತದಲ್ಲಿ ಬೆಂಕಿ ರೋಗ ಹರಡುವ ರೋಗಾಣು ಹಾಗೂ ಶುಂಠಿಯ ರೋಗಾಣು ಎರಡೂ ಬೇರೆ. ಈಗಾಗಲೇ ಸೊರಬದ ಉಳವಿ ಭಾಗ ಹಾಗೂ ಸಾಗರದ ತ್ಯಾಗರ್ತಿ ಭಾಗಗಳಲ್ಲಿ ಶುಂಠಿಗೆ ಬೆಂಕಿ ರೋಗ ಕಾಣಿಸಿಕೊಂಡಿರುವ ಬಗ್ಗೆ ರೈತರೇ ಮಾಹಿತಿ ನೀಡಿದ್ದಾರೆ.

— ಡಾ.ಗಿರೀಶ್, ವಿಜ್ಞಾನಿ, ಸಸ್ಯ ಸಂರಕ್ಷಣೆ ವಿಭಾಗ, ಕೆವಿಕೆ, ಶಿವಮೊಗ್ಗ