ಶಿವಮೊಗ್ಗದಲ್ಲಿ ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಆಯೋಜಿಸಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಎಂಎಲ್‌ಸಿ ಡಾ. ಧನಂಜಯ ಸರ್ಜಿ ಮಾತನಾಡಿದರು. ಎಂ.ಡಿ.ಶ್ರೀನಿವಾಸ್, ಟಿ.ಎಸ್.ಸಿದ್ದೇಶ್, ಜಿ.ಡಿ.ಮಂಜುನಾಥ, ಎಸ್.ಕುಮಾರ್ ಇತರರಿದ್ದರು. 
ಶಿವಮೊಗ್ಗ

ಒತ್ತಡ ನಿವಾರಣೆಗೆ ಸ್ನೇಹಿತರು, ಕ್ರೀಡೆ ಔಷಧ । Cricket turnament

ಶಿವಮೊಗ್ಗ: ಒತ್ತಡ ನಿವಾರಣೆಗೆ ಒಳ್ಳೆಯ ಸ್ನೇಹಿತರು ಮತ್ತು ಕ್ರೀಡೆ(Sports) ನಿಜವಾದ ಔಷಧ ಎಂದು ಎಂಎಲ್‌ಸಿ ಡಾ. ಧನಂಜಯ ಸರ್ಜಿ ಹೇಳಿದರು.
ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಗುರುವಾರ ಆಯೋಜಿಸಿದ್ದ ಎಂಸಿಸಿ ಕಪ್ ಸೀಸನ್-3 ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ(Cricket turnament)ಗೆ ಚಾಲನೆ ನೀಡಿ ಮಾತನಾಡಿದ ಅವರು, ಹಸಿವಾಗುತ್ತಿಲ್ಲ, ನಿದ್ದೆ ಬರುತ್ತಿಲ್ಲ, ಜೀರ್ಣ ಆಗುತ್ತಿಲ್ಲವೆಂದು ಪ್ರತಿಯೊಂದಕ್ಕೂ ಮಾತ್ರೆ ಕೊಡಿ ಎಂದು ವೈದ್ಯರ ಬಳಿ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸ್ನೇಹಿತರು, ಕುಟುಂಬದ ಸದಸ್ಯರೊಂದಿಗೆ ಒಳ್ಳೆಯ ಸಮಯ ಕಳೆಯುವುದು ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದೇ ಇಂತಹ ಸಮಸ್ಯೆಗಳಿಗೆ ದಿವ್ಯೌಷಧ. ಪ್ರತಿಯೊಂದಕ್ಕೂ ಔಷಧಗಳನ್ನು ಅವಲಂಬಿಸುವುದು ಸೂಕ್ತವಲ್ಲ ಎಂದರು.
ಇತ್ತೀಚೆಗೆ ಹೃದಯಾಘಾತ ಹೆಚ್ಚಾಗುತ್ತಿದೆ. ಸಣ್ಣ ಸಣ್ಣ ವಯಸ್ಸಿನವರು ಉಸಿರು ಚೆಲ್ಲುತ್ತಿದ್ದಾರೆ. ಆದಕಾರಣ ವಾಯುವಿಹಾರ, ಧ್ಯಾನದತ್ತ ಗಮನ ಹರಿಸಬೇಕು. ನಿತ್ಯ ವಾಕಿಂಗ್(Walking) ಮಾಡಬೇಕು ಎಂದು ಸಲಹೆ ನೀಡಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ನಮ್ಮ ಆಲೋಚನೆಗಳು ಸದಾ ಉತ್ತುಂಗದಲ್ಲಿರಬೇಕು. ಒಳ್ಳೆಯ ಆಲೋಚನೆಗಳು ದೇಶ ಕಟ್ಟಲು ಪೂರಕ. ನಮ್ಮ ಹೆಜ್ಜೆಗಳು ಸದಾ ಗೆಲುವಿನೆಡೆಗೆ ಇರಬೇಕು ಎಂದರು.
ಜಿಲ್ಲಾ ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾ ನಾಯ್ಕ್ ಮಾತನಾಡಿ, ಕ್ರೀಡೆಗಳು ಜೀವನದ ಪಾಠ ಕಲಿಸುತ್ತವೆ. ಇಂದಿನಗಳಲ್ಲಿ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದರು.
ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಂ.ಡಿ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಹಿಂದುಳಿದ ವರ್ಗಗಳ ಸಂಯೋಜಕ ಜಿ.ಡಿ.ಮಂಜುನಾಥ್, ಉದ್ಯಮಿ ಟಿ.ಎಸ್.ಸಿದ್ದೇಶ್, ಬಿಜೆಪಿ ನಗರ ಘಟಕದ ಉಪಾಧ್ಯಕ್ಷ ಎಸ್.ಕುಮಾರ್, ಸಂಘದ ಹಿರಿಯ ಸದಸ್ಯರಾದ ಮೋಹನ್ ಶೆಟ್ಟಿ, ಚಂದ್ರಣ್ಣ, ಎಂ.ಗೋವಿಂದರಾಜು ಉಪಸ್ಥಿತರಿದ್ದರು.

ಸ್ಕೂಟರಲ್ಲಿ ಶಾಸಕರ ಎಂಟ್ರಿ

ಕ್ರಿಕೆಟ್ ಪಂದ್ಯಾವಳಿ ಉದ್ಘಾಟನಾ ಸಮಾರಂಭಕ್ಕೆ ಶಾಸಕ ಚನ್ನಬಸಪ್ಪ ಅಂಗರಕ್ಷರು ಮತ್ತು ಸಿಬ್ಬಂದಿ ಇಲ್ಲದೆ ಒಬ್ಬರೇ ಸ್ಕೂಟರ್‌ನಲ್ಲಿ ಮೈದಾನದಕ್ಕೆ ಆಗಮಿಸಿ ಎಲ್ಲರ ಗಮನ ಸೆಳೆದರು. ಶಾಸಕರ ಸರಳತನಕ್ಕೆ ಕ್ರೀಡಾಭಿಮಾನಿಗಳು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.