ಯುಗಾದಿ ಹಬ್ಬದ ಅಂಗವಾಗಿ ಸಾಗರದಲ್ಲಿ ಸುಭಾಷ್ ಅವರು ಜನರಿಗೆ ಉಚಿತವಾಗಿ ಸಾವಯವ ಬೆಲ್ಲ, ಬೇವು ಮತ್ತು ಮಾವಿನಸೊಪ್ಪು ವಿತರಿಸಿದರು. 
ಶಿವಮೊಗ್ಗ

ಜನತೆಗೆ ಸಾವಯವ ಬೆಲ್ಲ ಉಚಿತ ವಿತರಣೆ | Ugadi

ಸಾಗರ: ಯುಗಾದಿ ಹಬ್ಬದ ಅಂಗವಾಗಿ ನೇತಾಜಿ ಸುಭಾಷ್‌ಚಂದ್ರ ಬೋಸ್ ಸಂಘಟನೆಯ ಮುಖ್ಯಸ್ಥ ಕೆ.ಸುಭಾಷ್ ಅವರು ತಮ್ಮ ಹೂವಿನ ಅಂಗಡಿಯಲ್ಲಿ ಬುದವಾರ ಜನತೆಗೆ ಉಚಿತವಾಗಿ ಸಾವಯವ ಬೆಲ್ಲ, ಬೇವು, ಮಾವು ವಿತರಿಸಿದರು. ಈ ಸಂದರ್ಭ ಸಾವಯವ ಪದಾರ್ಥಗಳ ಮಹತ್ವವನ್ನು ಪರಿಚಯಿಸಲಾಯಿತು. ಸುಭಾಷ್ ಅವರ ಇಡೀ ಕುಟುಂಬ ಬೇವು-ಬೆಲ್ಲ ವಿತರಣೆಯಲ್ಲಿ ತೊಡಗಿಕೊಂಡಿತ್ತು.
ಪತ್ರಿಕೆಯೊಂದಿಗೆ ಪ್ರತಿಕ್ರಯಿಸಿದ ನೇತಾಜಿ ಸುಭಾಷ್ ಚಂದ್ರಬೋಸ್ ಸಂಘಟನೆಯ ಮಖ್ಯಸ್ಥ ಸುಭಾಷ್ ಕೆ., ಸಾಗರ 
ತಾಲೂಕಿನ ಪ್ರಗತಿಪರ ಕೃಷಿಕರಿಂದ ಸಾವಯವ ಬೆಲ್ಲ ಖರೀದಿಸಿ ಯುಗಾದಿಯ ಸಂಭ್ರಮಕ್ಕಾಗಿ ಜನತೆಗೆ ಉಚಿತವಾಗಿ ನೀಡಿದ್ದೇವೆ. ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರದ ಮಹತ್ವವನ್ನು ಪರಿಚಯಿಸುವ ಕೆಲಸ ಮಾಡಿದ್ದೇವೆ. ವಿಷಯುಕ್ತವಾದ ರಾಸಾಯನಿಕ ಆಹಾರಗಳನ್ನು ಬಳಸುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಕೇಂದ್ರ ಸರ್ಕಾರವು ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಜನರಲ್ಲಿ ಸಾವಯವ ಪದಾರ್ಥಗಳನ್ನು ಬಳಸುವಂತೆ ಪ್ರೋತ್ಸಾಹಿಸಬೇಕಿದೆ.
ಖರೀದಿ ಜೋರು: ಹಬ್ಬದ ಹಿನ್ನೆಲೆಯಲ್ಲಿ ಸಾಗರ ಪಟ್ಟಣ ಜನರಿಂದ ಗಿಜಿಗಿಜಿ ಎನ್ನುತ್ತಿದೆ. ಪ್ರಮುಖ ವೃತ್ತಗಳಲ್ಲಿ ಹೂವು, ಹಣ್ಣು, ತರಕಾರಿ ವ್ಯಾಪಾರ ಭರದಿಂದ ನಡೆಯಿತು. ಗಣಪತಿ ಜಾತ್ರೆ ಮಾ.22ರಂದು ನಡೆಯಲಿದ್ದು, ಸಾಂಪ್ರದಾಯಿಕ ವಿಧಿವಿಧಾನಗಳು 19ರಿಂದಲೇ ಆರಂಭವಾಗಲಿವೆ. ಇದರ ಸಿದ್ಧತೆಯೂ ರಥಬೀದಿಯಲ್ಲಿ ನಡೆಯುತ್ತಿದೆ. ಅಂಗಡಿ ಮುಂಗಟ್ಟುಗಳ ಹರಾಜು ಪ್ರಕ್ರಿಯೆ ಆರಂಭವಾಗಿದೆ. ಹಬ್ಬಕ್ಕೆ ಬೇವು, ಬೆಲ್ಲ, ಮಾವಿನಸೊಪ್ಪು, ಬಾಳೆಕಂಬ ಖರೀದಿಯಲ್ಲಿ ಜನತೆ ತೊಡಗಿದ್ದಾರೆ.