ಶಿವಮೊಗ್ಗ ಸೈಬರ್ ಠಾಣೆ 
ಶಿವಮೊಗ್ಗ

ಆದಾಯದ ಆಸೆ ತೋರಿಸಿ ವಂಚನೆ | Online Fraud

ಪ್ರಮುಖ ಮುಖ್ಯಾಂಶಗಳು

  • ಅಪರಿಚಿತ ಸಂಖ್ಯೆಯಿಂದ ಶಿಕಾರಿಪುರದ ವ್ಯಕ್ತಿಗೆ ಬಂದಿತ್ತು ಫೋನ್
  • ಮೊಬೈಲ್ ಟವರ್ ಅಳವಡಿಸುವುದಾಗಿ ನಂಬಿಸಿ ವಂಚನೆ
  • ವಂಚಕರ ವಿರುದ್ಧ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು
ಶಿವಮೊಗ್ಗ: ಮೊಬೈಲ್ ಟವರ್(Mobile Tower) ಅಳವಡಿಸಿ ಲಕ್ಷಾಂತರ ರೂ. ಆದಾಯ ಹಾಗೂ ಕೆಲಸ ಕೊಡಿಸುವುದಾಗಿ ನಂಬಿಸಿ ಶಿಕಾರಿಪುರದ ವ್ಯಕ್ತಿಯೊಬ್ಬರಿಗೆ 5.15 ಲಕ್ಷ ರೂ. ವಂಚಿಸಲಾಗಿದೆ.
ಫೆ.5ರಂದು ಅಪರಿಚಿತ ಸಂಖ್ಯೆಯಿಂದ ಫೋನ್ ಬಂದಿತ್ತು. ಅದನ್ನು ಸ್ವೀಕರಿಸಿದ ವ್ಯಕ್ತಿಗೆ ನಿಮ್ಮ ಖಾಲಿ ಜಾಗದಲ್ಲಿ ಜಿಯೋ ಟವರ್ ಅಳವಡಿಸುತ್ತೇವೆ. ಅದಕ್ಕೆ ಪ್ರತಿಯಾಗಿ 60 ಲಕ್ಷ ರೂ. ಮುಂಗಡ(Advance), ಹಾಗೆಯೇ ತಿಂಗಳಿಗೆ 50 ಸಾವಿರ ರೂ. ಬಾಡಿಗೆ ಹಾಗೂ ನಿಮ್ಮ ಮಗನಿಗೆ ಕೆಲಸ ನೀಡುತ್ತೇವೆಂದು ನಂಬಿಸಿದ್ದಾರೆ.
ಆ ಮಾತು ನಂಬಿದ ಸಂತ್ರಸ್ತ ಹಾಗೂ ಅವರ ತಂದೆಗೆ ಟವರ್ ಅಳವಡಿಕೆಯ ಪ್ರಕ್ರಿಯೆ ಆರಂಭಿಸಲು ಪ್ರೊಸೆಸಿಂಗ್ ಫೀಸ್(Processing Fee), ಟೆಲಿಕಾಂ ಇಲಾಖೆ ಲೈಸೆನ್ಸ್ ಶುಲ್ಕ ಮತ್ತು ಜಿಎಸ್‌ಟಿ ಹೆಸರಿನಲ್ಲಿ ಹಣ ಪಾವತಿಸುವಂತೆ ವಂಚಕರು ಸೂಚಿಸಿದ್ದಾರೆ. ವಿವಿಧ ಬ್ಯಾಂಕ್ ಖಾತೆ ಹಾಗೂ ಕ್ಯೂಆರ್ ಕೋಡ್‌ಗಳ ಮೂಲಕ ಹಂತಹಂತವಾಗಿ 5,15,900 ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಹಣ ಪಡೆದ ನಂತರವೂ ವಂಚಕರು ತೃಪ್ತರಾಗದೆ ಅಗ್ನಿಶಾಮಕ ಇಲಾಖೆಯ ಪರ್ಮಿಷನ್‌ಗಾಗಿ ಮತ್ತೆ 1 ಲಕ್ಷ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಇದರಿಂದ ಅನುಮಾನಗೊಂಡ ವ್ಯಕ್ತಿ ತಮ್ಮ ಸ್ನೇಹಿತರ ಬಳಿ ಚರ್ಚಿಸಿದಾಗ ತಾವು ಸೈಬರ್ ವಂಚನೆಗೆ ಒಳಗಾಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆ ವಂಚಕರ ವಿರುದ್ಧ ಸೈಬರ್ ಠಾಣೆ(Cyber ​​Station)ಯಲ್ಲಿ ಪ್ರಕರಣ ದಾಖಲಾಗಿದೆ.