ಭಾರಂಗಿ ಹೋಬಳಿ ಭಾನುಕುಳಿ ಗ್ರಾಪಂ ವ್ಯಾಪ್ತಿಯ ಗದ್ದೆಗಳು ಜಲಾವೃತವಾಗಿರುವುದು.
ಕಾರ್ಗಲ್: ಶರಾವತಿ ಜಲಾನಯನ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದ ಲಿಂಗನಮಕ್ಕಿ ಜಲಾಶಯಕ್ಕೆ ನೀರಿನ ಒಳಹರಿವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಶನಿವಾರ ಬೆಳಗ್ಗೆಯಿಂದ ಭಾನುವಾರ ಬೆಳಗ್ಗೆವರೆಗೆ ಜಲಾಶಯದಲ್ಲಿ ನೀರಿನ ಮಟ್ಟ ನಾಲ್ಕು ಅಡಿಯಷ್ಟು ಏರಿಕೆಯಾಗಿದೆ. ಭಾರಂಗಿ ಹೋಬಳಿಯ ಭಾನುಕುಳಿ ಗ್ರಾಪಂ ವ್ಯಾಪ್ತಿಯ ನೂರಾರು ಎಕರೆ ಗದ್ದೆ ಜಲಾವೃತವಾಗಿವೆ.
ಲಿಂಗನಮಕ್ಕಳಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಸಾಧಾರಣವಾಗಿತ್ತು. ಶನಿವಾರ ಬಿದ್ದ ಮಳೆಯಿಂದ ದಿಢೀರ್ ಏರಿಕೆ ಕಂಡಿದೆ. ಲಿಂಗನಮಕ್ಕಿ ಜಲಾಶಯದ ಒಳಹರಿವು 77,580 ಕ್ಯೂಸೆಕ್ ಇದೆ. ಕಳೆದ 15 ದಿನಗಳಿಂದ ಅಣೆಕಟ್ಟು ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆ ಬೀಳುತ್ತಿದೆ. ಇದರಿಂದ ಪ್ರತಿನಿತ್ಯ ಸರಾಸರಿ ಒಂದು ಅಡಿ ನೀರು ಜಲಾಶಯದಲ್ಲಿ ಸಂಗ್ರಹವಾಗುತ್ತಿದೆ. ಆದರೆ ಶನಿವಾರ ಬೆಳಗ್ಗೆಯಿಂದ ಭಾನುವಾರ ಬೆಳಗ್ಗೆವರೆಗೆ ಸುರಿದ ಭಾರಿ ಮಳೆಗೆ ಜಲಾಶಯದ ಒಳಹರಿವಿನಲ್ಲಿ ಏರಿಕೆಯಾಗಿದೆ.
ಮುಂಗಾರು ಆರಂಭ ತಡವಾಗಿದ್ದು, ಈ ಬಾರಿ ಮಳೆ ಪ್ರಮಾಣ ಕಡಿಮೆ ಎನ್ನುವಂತಹ ಸಂದರ್ಭದಲ್ಲಿಯೇ ಲಿಂಗನಮಕ್ಕಿ ಜಲಾಶಯ ಬೆಡ್ ಲೆವೆಲ್ ತಲುಪಲು (1795 ಅಡಿ) ಇನ್ನು 13 ಅಡಿ ಬೇಕಿದೆ.
ಸಮುದ್ರ ಮಟ್ಟದಿಂದ ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1819 ಅಡಿ. ಪ್ರಸ್ತುತ 1781.85 ಅಡಿಗೆ ತಲುಪಿದ್ದು, ಶೇ 38.13 ಭರ್ತಿಯಾಗಿದೆ. 151 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 57.81 ಟಿಎಂಸಿ ನೀರು ಸಂಗ್ರಹವಿದೆ.
ಭಾನುಕುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಗದ್ದೆಗಳು ಜಲಾವೃತವಾಗಿವೆ. ಭತ್ತ ನಾಟಿಗೂ ಮುನ್ನ ಹಾಕಲಾಗಿದ್ದ ಗೊಬ್ಬರ ಉಪಯೋಗಕ್ಕೆ ಬಾರದಂತಾಗಿದೆ. ಶನಿವಾರ ಹಗಲೂ ರಾತ್ರಿ ಸುರಿದ ಮಳೆಯಿಂದ ಇಲ್ಲಿನ ಕೊಂಜವಳ್ಳಿ, ಹುಲಿಬಳ್ಳಿ, ಕಣಪಗಾರು, ಹಾಲುಗೋಡು ಸೇರಿ ಸುತ್ತಮುತ್ತಲಿನ ಸಾಕಷ್ಟು ಜಮೀನಿನ ಪ್ರದೇಶದಲ್ಲಿ ಮಳೆ ನೀರು ಹರಿದ ಪರಿಣಾಮ ಗೊಬ್ಬರ ಕೊಚ್ಚಿಕೊಂಡು ಹೋಗಿದೆ. ಇದರಿಂದ ಕೃಷಿ ಕಾರ್ಯಕ್ಕೆ ಹಿನ್ನಡೆಯಾಗಿದೆ.