ಆಗುಂಬೆ ಸಮೀಪ ಲಕ್ಕುಂದ ಗ್ರಾಮದ ಒಂಟಿ ಮನೆಯಲ್ಲಿ ದರೋಡೆ ಮಾಡಿದ್ದ ಆರೋಪಿಗಳಿಂದ ಪೊಲೀಸರು ಚಿನ್ನಾಭರಣ ಜಪ್ತಿ ಮಾಡಿದರು. 
ಶಿವಮೊಗ್ಗ

ವೃದ್ಧೆ ಮನೆಗೆ ನುಗ್ಗಿ ದರೋಡೆ ಮಾಡಿದ್ದ ನಾಲ್ವರ ಬಂಧನ | Robbery case

ಪ್ರಮುಖ ಮುಖ್ಯಾಂಶಗಳು

  • ಲಕ್ಕುಂದ ಗ್ರಾಮದ ವಿಶಾಲಾಕ್ಷಿ ಅವರ ಮನೆಗೆ ನುಗ್ಗಿದ್ದ ಮೂವರು
  • ಕುಡಿವ ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ
  • ನಾಲ್ವರನ್ನು ಬಂಧಿಸಿದ ಆಗುಂಬೆ ಠಾಣೆ ಪೊಲೀಸರು
ಶಿವಮೊಗ್ಗ: ಕುಡಿಯುವ ನೀರು ಕೇಳುವ ನೆಪದಲ್ಲಿ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಒಂಟಿ ವೃದ್ಧೆ ವಾಸವಾಗಿದ್ದ ಮನೆಗೆ ನುಗ್ಗಿ ಹಾಡುಹಗಲೇ 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದರೋಡೆ( Robbery) ಮಾಡಿದ್ದ ನಾಲ್ವರನ್ನು ಆಗುಂಬೆ ಠಾಣೆ ಪೊಲೀಸರು ಬಂಧಿಸಿದ್ದು, ಅವರಿಂದ 11.96 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಭದ್ರಾವತಿ ತಾಲೂಕಿನ ಜೇಡಿಕಟ್ಟೆ(Jedikatte)ಯ ವೈ.ಭರತ್ ಅಲಿಯಾಸ್ ಭಟ್ಟ (25), ಶಿವಮೊಗ್ಗ ತಾಲೂಕಿನ ಜಾವಳ್ಳಿ ಗ್ರಾಮದ ಅಶೋಕ(28), ಭದ್ರಾವತಿ ವೀರಾಪುರ ಭದ್ರಾ ಕಾಲನಿಯ ಮಹಮ್ಮದ್ ಇಬ್ರಾಹಿಂ ಮೀರಾ ಅಲಿಯಾಸ್ ಟಕ್ಕರ್ (24), ತೀರ್ಥಹಳ್ಳಿ ಮೇಲಿನ ಕುರುವಳ್ಳಿಯ ಪಾರ್ತಿಪ್(25) ಬಂಧಿತರು.
 ಕಳೆದ ಏ.21ರಂದು ಘಟನೆ ಆಗುಂಬೆ(Agumbe) ಸಮೀಪದ ಲಕ್ಕುಂದ ಗ್ರಾಮದ ವಿಶಾಲಾಕ್ಷಿ (74) ಅವರ ಮನೆಗೆ ನುಗ್ಗಿದ್ದ ಮೂವರು, ವೃದ್ಧೆಯನ್ನು ಕಟ್ಟಿಹಾಕಿ ಅವರ ಮೈಮೇಲಿದ್ದ ಹಾಗೂ ಬೀರುವಿನಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದರು. ಈ ಬಗ್ಗೆ ವೃದ್ಧೆ ವಿಶಾಲಾಕ್ಷಿ ಅವರು ನೀಡಿದ ದೂರಿನ ಮೇರೆಗೆ ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್‌ಪಿ ಬಿ.ನಿಖಿಲ್ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಡಿವೈಎಸ್‌ಪಿ ಅರವಿಂದ ಕಲಗುಜ್ಜಿ, ಮಾಳೂರು ಸಿಪಿಐ ಎಲ್.ರಾಜಶೇಖರ್, ತೀರ್ಥಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಇಮ್ರಾನ್ ಬೇಗ್ ನೇತೃತ್ವದಲ್ಲಿ ಆಗುಂಬೆ ಠಾಣೆ ಪಿಎಸ್‌ಐ ಶಿವನಗೌಡ, ಮಾಳೂರು ಠಾಣೆ ಪಿಎಸ್‌ಐ ಸುನೀಲ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 10.80 ಲಕ್ಷ ರೂ. ಮೌಲ್ಯದ 70 ಗ್ರಾಂ ಬಂಗಾರದ ಆಭರಣಗಳು, 16,700 ರೂ. ಮೌಲ್ಯದ 56 ಗ್ರಾಂ ಬೆಳ್ಳಿ ವಸ್ತುಗಳು, ತಲಾ 50 ಸಾವಿರ ರೂ. ಮೌಲ್ಯದ ಎರಡು ಸ್ಕೂಟಿಗಳನ್ನು ಜಪ್ತಿ ಮಾಡಲಾಗಿದೆ.

ವೃದ್ಧೆ ಒಬ್ಬರೇ ಇದ್ದಿದ್ದನ್ನು ಅರಿತಿದ್ದರು !

ವಿಶಾಲಾಕ್ಷಿ ಅವರ ಪತಿ 15 ವರ್ಷದ ಹಿಂದೆ ಮೃತಪಟ್ಟಿದ್ದು, ಮನೆಯಲ್ಲಿ ಒಬ್ಬರೇ ವಾಸವಿದ್ದರು ಎಂಬುದನ್ನು ಖಚಿತಪಡಿಸಿಕೊಂಡಿದ್ದ ಮೂವರು ಏ.21ರಂದು ಮಧ್ಯಾಹ್ನ 3ರ ಸುಮಾರಿಗೆ ಮನೆ ಬಾಗಿಲು ತಟ್ಟಿದ್ದರು. ಒಳಗಿದ್ದ ವಿಶಾಲಾಕ್ಷಿ ಅವರಿಗೆ ಕುಡಿಯಲು ನೀರು ಕೇಳಿದ್ದರು. ಬಾಗಿಲು ತೆರೆಯದ ವಿಶಾಲಾಕ್ಷಿ ಅವರು ಕಿಟಕಿ ಮೂಲಕವೇ ನಲ್ಲಿಯಲ್ಲಿದ್ದ ನೀರು ಕುಡಿಯುವಂತೆ ಹೇಳಿದ್ದರು. ಅನುಮಾನಗೊಂಡ ವಿಶಾಲಾಕ್ಷಿ ಅವರು ಕೆಲ ನಿಮಿಷದ ಬಳಿಕ ಹಿತ್ತಲ ಬಾಗಿಲು ತೆರೆದು ಪರಿಶೀಲಿಸಲು ಮುಂದಾದಾಗ ಮೂವರು ಏಕಾಏಕಿ ಮನೆಯೊಳಗೆ ನುಗ್ಗಿ ವಿಶಾಲಾಕ್ಷಿ ಅವರನ್ನು ಒಳಗೆ ಎಳೆದೊಯ್ದು, ಹಲ್ಲೆ ಮಾಡಿ, ಕೈಗಳನ್ನು ಸೀರೆಯಿಂದ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಅಡುಗೆ ಮನೆಯಲ್ಲಿ ಕೂಡಿ ಹಾಕಿದ್ದರು. ಬಳಿಕ ವೃದ್ಧೆ ಧರಿಸಿದ್ದ ಹಾಗೂ ಮನೆಯಲ್ಲಿದ್ದ ಚಿನ್ನಾಭರಣ, ನಗದು, ಮೊಬೈಲ್ ದೋಚಿದ್ದರು.