ಕಲಸೆ ಚಂದ್ರಪ್ಪ 
ಶಿವಮೊಗ್ಗ

ಮಾಜಿ ಸಚಿವರ ಆರೋಪ ನಿರಾಧಾರ | Pressmeet

ಶಿವಕುಮಾರ ಎಸ್.ಪಿ.
ಸಾಗರ: ವಿಧಾನಸಭಾ ಕ್ಷೇತ್ರದಲ್ಲಿ ಪೊಲೀಸ್ ಸೇರಿ ಯಾವ ಇಲಾಖೆಯಲ್ಲೂ ಅಧಿಕಾರಿಗಳ ಕೊರತೆ ಇಲ್ಲ. ಮಾಜಿ ಸಚಿವ ಹರತಾಳು ಹಾಲಪ್ಪ ಮಾಡುತ್ತಿರುವ ಆರೋಪಗಳು ನಿರಾಧಾರ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಹೇಳಿದರು.
ಬೇಳೂರು ಜನಪರ ನಡೆ ಸಹಿಸದೆ ಹರತಾಳು ಹಾಲಪ್ಪ ಆಧಾರರಹಿತ ಹೇಳಿಕೆ ನೀಡುತ್ತಲೇ ಇದ್ದಾರೆ. ಕ್ಷೇತ್ರ ಎಲ್ಲ ಠಾಣೆಗಳಲ್ಲೂ ಅಧಿಕಾರಿ, ಸಿಬ್ಬಂದಿ ಸಮರ್ಪಕವಾಗಿ ಇದ್ದಾರೆ. ತಾಲೂಕು ಮಟ್ಟದ ಅಧಿಕಾರಿಗಳು ಇದ್ದಾರೆ. ಹಾಲಪ್ಪ ಅವರು ವಿಪಕ್ಷದಲ್ಲಿದ್ದು ಜನಪರ ಹೋರಾಟಗಳನ್ನು ಕೈಗೊಳ್ಳಬೇಕಿತ್ತು. ಅದರ ಬದಲಿಗೆ ಪ್ರಚಾರಕ್ಕಾಗಿ ಶಾಸಕರ ವಿರುದ್ಧ ಸುಳ್ಳು ಆರೋಪ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.
ಕೇಂದ್ರ ಸರ್ಕಾರ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಏಕಾಏಕಿ 1400 ರೂ. ಹೆಚ್ಚಿಸಿದ್ದರಿಂದ ಬಡಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಸಣ್ಣ ಹೋಟೆಲ್ ಉದ್ಯಮಗಳು ಮುಚ್ಚಿ ಹೋಗುತ್ತಿದೆ. ತಿಂಡಿತಿನಿಸುಗಳ ಬೆಲೆ ದುಬಾರಿಯಾಗಿದೆ. ಈ ಹಿಂದೆ 50 ರೂ. ಗ್ಯಾಸ್ ದರ ಹೆಚ್ಚಾದರೆ ಬೀದಿಗೆ ಇಳಿಯುತ್ತಿದ್ದ ಬಿಜೆಪಿ ಮಹಿಳಾ ಪ್ರಮುಖರು ಈಗೆಲ್ಲಿದ್ದಾರೆ ಎಂದು ಪ್ರಶ್ನಿಸಿದರು.
ಮೇ 7ರಂದು ನಡೆಯಲಿರುವ ಬೇಸೂರು ಅಣು ವಿದ್ಯುತ್ ಸ್ಥಾವರ ವಿರೋಧಿ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡುತ್ತದೆ. ಅಣು ವಿದ್ಯುತ್ ಸ್ಥಾವರ ಬೇಡ ಎಂದು ಶಾಸಕರು ಈಗಾಗಲೇ ಮುಖ್ಯಮಂತ್ರಿಗೆ, ಸಂಬಂಧಿಸಿದ ಸಚಿವರಿಗೆ ಮನವಿ ನೀಡಿದ್ದಾರೆ. ಕೇಂದ್ರ ಸರ್ಕಾರ ಕೂಡಾ ಯೋಜನೆಯನ್ನು ಹಿಂಪಡೆಯಬೇಕು ಎಂದರು.
ಕಾಂಗ್ರೆಸ್ ಪ್ರಮುಖರಾದ ಐ.ಎನ್.ಸುರೇಶಬಾಬು, ಕೆ.ಹೊಳೆಯಪ್ಪ, ಸೋಮಶೇಖರ ಲ್ಯಾವಿಗೆರೆ, ಗಣಪತಿ ಮಂಡಗಳಲೆ, ಮಧುಮಾಲತಿ, ಲಲಿತಮ್ಮ, ಚಂದ್ರಪ್ಪ, ಸದ್ದಾಂ, ಸೋಮಶೇಖರ, ಗಿರೀಶ್ ಕೋವಿ, ದಿನೇಶ್, ರವಿಕುಮಾರ್, ಸೈಯದ್ ಜಾಕೀರ್ ಇತರರಿದ್ದರು.