ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆ ಸಂಬಂಧ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸಭೆ ನಡೆಸಿದರು. ಬಿ.ನಿಖಿಲ್, ವಿ.ಅಭಿಷೇಕ್ ಇದ್ದರು.
- ಪ್ರತಿ ಸಂಘಕ್ಕೆ ಸರ್ಕಾರದಿಂದ ವಾರ್ಷಿಕ 10 ಲಕ್ಷ ರೂ. ಅನುದಾನ
- ನಾಯಕತ್ವ ಬೆಳೆಸುವ ಉದ್ದೇಶ
- ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾಹಿತಿ
ಶಿವಮೊಗ್ಗ: ಯುವಜನತೆಯಲ್ಲಿ ಕ್ರೀಡೆ, ವೈಜ್ಞಾನಿಕ ಮನೋಭಾವ, ಸಂಸ್ಕೃತಿ, ಸಾಮಾಜಿಕ ಸಾಮರಸ್ಯ, ಸಂವಿಧಾನದ ಮೌಲ್ಯಗಳು, ನಾಯಕತ್ವ (leadership) ಗುಣಗಳನ್ನು ಬೆಳೆಸುವ ಉದ್ದೇಶದಿಂದ ರಾಜ್ಯಾದ್ಯಂತ ಹತ್ತು ಸಾವಿರ ಭಾರತ್ (bharath) ಜೋಡೋ (jodo) ಯುವಕ ಸಂಘಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಇದಕ್ಕೆ ಪೂರಕವಾಗಿ ಜಿಲ್ಲೆಯಲ್ಲೂ ಸಂಘಗಳ ರಚನೆಯಾಗಲಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕನಿಷ್ಟ 16ರಿಂದ ಗರಿಷ್ಟ 35 ವರ್ಷದೊಳಗಿನ ಯುವಕ - ಯುವತಿಯರು ಈ ಸಂಘಗಳಲ್ಲಿ ಸದಸ್ಯರಾಗಬಹುದು. ಪ್ರತಿ ಸಂಘದಲ್ಲಿ ಕನಿಷ್ಟ 100ರಿಂದ 250 ಯುವ ಸದಸ್ಯರು ಇರಬಹುದಾಗಿದೆ ಎಂದು ಹೇಳಿದರು.
ಪ್ರತಿ ಗ್ರಾಪಂ ಮಟ್ಟದಲ್ಲಿ ಒಂದು ಹಾಗೂ ನಗರ ಪ್ರದೇಶಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ 4-10ಸಾವಿರ ಮಂದಿಗೆ ಒಂದು ಸಂಘ ರಚಿಸಬಹುದಾಗಿದೆ. ಪ್ರತಿ ಸಂಘಕ್ಕೆ ಸರ್ಕಾರದಿಂದ ವಾರ್ಷಿಕ 10 ಲಕ್ಷ ರೂ. ಅನುದಾನವನ್ನು ಮೂರು ಕಂತುಗಳಲ್ಲಿ ಬ್ಯಾಂಕ್ ಖಾತೆಗೆ ಜಮೆ ಮಾಡಲಿದೆ ಎಂದರು.
ಈ ಯೋಜನೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಎಸ್ಪಿ ಬಿ.ನಿಖಿಲ್, ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕಾ, ಕುವೆಂಪು ವಿವಿ ಎನ್‌ಎನ್‌ಎಸ್ ಸಂಯೋಜಕಿ ಶುಭಾ ಮರವಂತೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ ಮುಂತಾದವರು ಸಭೆಯಲ್ಲಿದ್ದರು.
ಸರ್ಕಾರ ನೀಡುವ ಅನುದಾನವನ್ನು ಕ್ರೀಡಾ ಪರಿಕರ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೇಕಾದ ಉಪಕರಣಗಳು, ಕಂಪ್ಯೂಟರ್, ಇಂಟರ್ನೆಟ್ ಸೌಲಭ್ಯ, ಗ್ರಂಥಾಲಯ ಅಥವಾ ಸಂಘದ ಕಚೇರಿಗೆ ಅಗತ್ಯವಿರುವ ಮೂಲ ಸೌಕರ್ಯಕ್ಕೆ ಬಳಸಬಹುದು. ಪ್ರತಿ ಸಂಘದಲ್ಲಿ ತರಬೇತುದಾರರ ನೇಮಕಕ್ಕೆ ಅವಕಾಶವಿದೆ. ಅವರಿಗೆ ಗೌರವಧನ ನೀಡಬಹುದಾಗಿದೆ.
ಸಂಘವು 15 ಜನ ಸದಸ್ಯರ ಆಂತರಿಕ ಕಾರ್ಯಕಾರಿ ಸಮಿತಿಯಾಗಿರುತ್ತದೆ. ಇದರಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಚಿ ಹಾಗೂ 12 ಜನರ ಕಾರ್ಯಕಾರಿ ಸದಸ್ಯರಿರಲಿದ್ದಾರೆ. ಮಹಿಳಾ ಪ್ರಾತಿನಿಧ್ಯ, ಮೀಸಲಾತಿ ಕಡ್ಡಾಯ. ನಿಯಮಾನುಸಾರ ರಚನೆಗೊಂಡ ಸಮಿತಿಗೆ ಎರಡು ವರ್ಷಗಳ ಅಧಿಕಾರಾವಧಿ ನಿಗದಿಪಡಿಸಿದೆ. ಈ ಸದಸ್ಯರು ಮುಂದಿನ ಅವಧಿಗೆ ಮುಂದುವರಿಯುವಂತಿಲ್ಲ.
ಸಂಘವು ಅಳವಡಿಸಿಕೊಂಡಿರುವ ಪ್ರಮುಖ ಚಟುವಟಿಕೆಗಳನ್ನು ಮಾಡಬೇಕು. ವಿಶೇಷವಾಗಿ ಕ್ರೀಡೆ ಮತ್ತು ಫಿಟ್‌ನೆಸ್‌ಗೆ ಸಂಬಂಧಿಸಿದ ಕ್ರೀಡಾಕೂಟಗಳು, ಯೋಗ ಶಿಬಿರಗಳು, ಸಾಂಪ್ರದಾಯಿಕ ಆಟಗಳ ಆಯೋಜನೆ, ಸಮುದಾಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆರೆ, ಕಲ್ಯಾಣಿಗಳ ಸ್ವಚ್ಛತೆ, ಸ್ವಚ್ಛತಾ ಅಭಿಯಾನಗಳನ್ನು ನಡೆಸಬೇಕು.
ಪರಿಸರ ಸಂರಕ್ಷಣೆ ವಿಚಾರದಲ್ಲಿ ಸಸಿ ನೆಡುವುದು, ಹವಾಮಾನ ಬದಲಾವಣೆ ಜಾಗೃತಿ ನಡೆಸಬೇಕು. ರಕ್ತದಾನ ಶಿಬಿರಗಳು, ಮಾನಸಿಕ ಆರೋಗ್ಯ ಜಾಗೃತಿ ಶಿಬಿರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾವೈಕ್ಯತೆ ಮೂಡಿಸುವ ಚಟುವಟಿಕೆಗಳನ್ನು ನಡೆಸಬೇಕು. ಇದರ ಜತೆ ಸ್ಕಿಲ್ ಡೆವಲಪ್‌ಮೆಂಟ್‌ಗೆ ಸಂಬಂಧಿಸಿದಂತೆ ಡಿಜಿಟಲ್ ಸಾಕ್ಷರತೆ, ಉದ್ಯಮಶೀಲತೆ ಮತ್ತು ಜೀವನ ಕೌಶಲ್ಯ ತರಬೇತಿ ನೀಡಬೇಕು.