ಸಾಗರದಲ್ಲಿ ಆಯೋಜಿಸಿದ್ದ ಬನ್ನಂಜೆ ಗೋವಿಂದಾಚಾರ್ಯ ವಿಶ್ವ ನಮನ-95 ಕಾರ್ಯಕ್ರಮದಲ್ಲಿ ಉಮಾಕಾಂತ ಭಟ್ಟ, ಮಲ್ಲೇಪುರಂ ಜಿ. ವೆಂಕಟೇಶ್, ಡಾ. ವೀಣಾ ಬನ್ನಂಜೆ, ಡಾ. ಜಿ.ಎಸ್.ಭಟ್, ಸೌಮ್ಯಾ ಅರುಣ ಇತರರಿದ್ದರು.
ಸಾಗರ: ಸಂಸ್ಕೃತ ಪಾಂಡಿತ್ಯಕ್ಕೆ ರಾಜವೈಭವ ತಂದುಕೊಟ್ಟವರು ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯರು ಎಂದು ಶಿರಸಿಯ ನಿವೃತ್ತ ಪ್ರಾಚಾರ್ಯ ಉಮಾಕಾಂತ ಭಟ್ಟ ಹೇಳಿದರು.
ಸಾಗರದಲ್ಲಿ ಸಂಕಲನ ಸಂಸ್ಥೆ, ರವೀಂದ್ರ ಪುಸ್ತಕಾಲಯ, ಶ್ರೀ ಶಂಕರ ಮಠ, ಬನ್ನಂಜೆ ಅಭಿಮಾನಿ ಬಳಗ ಹಾಗೂ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದಿಂದ ಆಯೋಜಿಸಿದ್ದ ಬನ್ನಂಜೆ-90 ವಿಶ್ವನಮನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಸಾಂಸ್ಕೃತಿಕ ಹಿನ್ನೆಲೆಯಲ್ಲಿ ವಿಶ್ವಮಾನ್ಯರಾಗಿ ಅವರ ನೆನಪು ಶಾಶ್ವತ. ಬನ್ನಂಜೆ ಅವರು ಒಬ್ಬ ವ್ಯಕ್ತಿಯಾಗಿ ನಮಗೆ ಕಾಣಿಸುವುದಿಲ್ಲ. ಅವರು ಒಂದು ಸಂಸ್ಥೆಯಾಗಿ ಉಳಿಯುತ್ತಾರೆ. ಅವರು ಆಧುನಿಕ ವಿದ್ಯಾಭ್ಯಾಸ ಮಾಡಿದವರಲ್ಲ. 75 ವರ್ಷಗಳ ಹಿಂದೆ ಗುರುಕುಲ ಶಿಕ್ಷಣ ಪದ್ಧತಿ ಇತ್ತು. ಅಂತಹ ಒಂದು ಸಾಂಕೇತಿಕ ಚೌಕಟ್ಟಿನಲ್ಲಿ ಬೆಳೆದವರು ಎಂದು ತಿಳಿಸಿದರು.
ಒಬ್ಬ ಸಂಶೋಧಕ, ಸಾಧಕರಾಗಿ ಬೆಳೆದರು. ಇವತ್ತಿನ ಸಂಶೋಧನೆ ಎಂದರೆ ಅದು ಒತ್ತಡಪೂರ್ವಕವಾಗಿ ಮಾಡಬೇಕು. ಆದರೆ ಬನ್ನಂಜೆ ಅವರಿಗೆ ಅಧ್ಯಯನವೇ ಸಂಶೋಧನೆಯಾಗಿತ್ತು. ಸಂಶೋಧನೆ ದೃಷ್ಟಿಗೆ ಅಧ್ಯಯನ ಇರಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು. ವೈಜ್ಞಾನಿಕ ವ್ಯವಸ್ಥೆ ಅವರ ಮನಸ್ಸಿನಲ್ಲಿತ್ತು. ವಿದ್ವಾಂಸ, ಕವಿ, ಪ್ರವಚನಕಾರರಾಗಿ ಮೊದಲ ಸಾಲಿನಲ್ಲಿ ನಿಲ್ಲುವ ದೈತ್ಯ ಪ್ರತಿಭೆ ಅವರಾಗಿದ್ದರು ಎಂದು ಬಣ್ಣಿಸಿದರು.
ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ, ಬನ್ನಂಜೆ ಅವರು ತಮ್ಮ ಜೀವನವಿಡೀ ಸಾರಸ್ವತ ಸಂಪತ್ತಿಗಾಗಿ ಕ್ರಿಯಾಶಕ್ತಿಯನ್ನು ವಿನಿಯೋಗ ಮಾಡಿಕೊಂಡರು. ಭಾರತ, ರಾಮಾಯಣ, ಭಗವದ್ಗೀತೆ, ಪುರಾಣ, ಶಾಸ್ತ್ರ ಗ್ರಂಥ, ಉಪನಿಷತ್ ಮುಂತಾದ ವಿಷಯಗಳಲ್ಲಿ ಸಂಶೋಧನಾ ದೃಷ್ಟಿ ರೂಪಿಸಿಕೊಂಡಿದ್ದರು. ಆಧುನಿಕ ರೀತಿಯಲ್ಲಿ ಪ್ರಾಣಾಯಾಮ ಸೂಕ್ತ ಬರೆದಿದ್ದಾರೆ. ರಾಜ್ಯದ ವಿವಿಧೆಡೆ ಉಪನ್ಯಾಸ ನೀಡಿದ್ದಾರೆ ಎಂದರು.
ಬನ್ನಂಜೆ ಗೋವಿಂದಾಚಾರ್ಯರ ಕುರಿತು ಅವರ ಪುತ್ರಿ ಡಾ. ವೀಣಾ ಬನ್ನಂಜೆ, ನಿವೃತ್ತ ಪ್ರಾಚಾರ್ಯ ಡಾ. ಜಿ.ಎಸ್.ಭಟ್, ಶುಂಠಿ ಸತ್ಯನಾರಾಯಣ ಭಟ್, ವೈ.ಎ.ದಂತಿ, ದೀಪಕ್ ಸಾಗರ್, ಸೌಮ್ಯಾ ಅರುಣ, ಅಶ್ವಿನಿಕುಮಾರ್, ಸದಾನಂದ ಶರ್ಮ, ಅಬಸೆ ದಿನೇಶಕುಮಾರ್ ಜೋಶಿ ಮಾತನಾಡಿದರು. ಕವಿತಾ, ಮ.ಸ.ನಂಜುಂಡಸ್ವಾಮಿ, ಸವಿತಾ ಬದ್ರೀಶ್ ಇತರರಿದ್ದರು.