ಹುಂಚ ಸಮೀಪದ ನಾಗರಹಳ್ಳಿಯಲ್ಲಿ ಆಯುಷ್ಮಾನ್​ ಆರೋಗ್ಯ ಮಂದಿರಕ್ಕೆ ಶಾಸಕ ಶಾಸಕ ಆರಗ ಜ್ಞಾನೇಂದ್ರ ಶಂಕುಸ್ಥಾಪನೆ ನೆರವೇರಿಸಿದರು. ಶ್ರೀಧರ್​, ರಾವೇಂದ್ರ, ಆಶಾ, ಮಧುಕುಮಾರ್​ ಇತರರಿದ್ದರು. 
ಶಿವಮೊಗ್ಗ

ಆಹಾರ ಗುಣಮಟ್ಟದ ಚಿಂತನೆ ಅವಶ್ಯ

ಟಿ.ಎಚ್.ಸಂತೋಷ್ ಕುಮಾರ್

ಪ್ರಮುಖ ಮುಖ್ಯಾಂಶಗಳು

  • ಆಯುಷ್ಮಾನ್​ ಆರೋಗ್ಯ ಮಂದಿರಕ್ಕೆ ಶಂಕುಸ್ಥಾಪನೆ
  • ಶಾಸಕ ಆರಗ ಜ್ಞಾನೇಂದ್ರ ಹೇಳಿಕೆ
  • ಆಹಾರ ಗುಣಮಟ್ಟದ ಚಿಂತನೆ ಅವಶ್ಯ
ರಿಪ್ಪನ್​ಪೇಟೆ: ಅಧಿಕ ಇಳುವರಿ ದುರಾಸೆಗೆ ಬಿದ್ದ ಪರಿಣಾಮವಾಗಿ ಪ್ರಸ್ತುತ ನಾವು ತಿನ್ನುವ ಆಹಾರ ಸಂಪೂರ್ಣ ವಿಷಮಯವಾಗಿದೆ. ಈ ಬಗ್ಗೆ ಮರು ಚಿಂತನೆ ಮಾಡದಿದ್ದರೆ ಭವಿಷ್ಯ ಅತ್ಯಂತ ಕರಾಳವಾಜಲಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಹುಂಚ ಸಮೀಪದ ನಾಗರಹಳ್ಳಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿರ್ಮಾಣವಾಗಲಿರುವ ಆಯುಷ್ಮಾನ್​ ಆರೋಗ್ಯ ಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಮ್ಮ ಪರಂಪರೆ ಮರೆತು ಆಹಾರ, ಆಚಾರ ವಿಚಾರಗಳಲ್ಲಿ ಪ್ರಕೃತಿಗೆ ವಿರುದ್ಧವಾಗಿ ಬದುಕು ರೂಪಿಸಿಕೊಳ್ಳುತ್ತಿರುವ ನಾವು ವಿನಾಶದತ್ತ ಮುಖ ಮಾಡಿದ್ದೇವೆ ಎಂದರು.
ಮನುಷ್ಯ ಮಾತ್ರವಲ್ಲದೆ ಭೂಮಿ ಮೇಲಿನ ಪ್ರತಿ ಜೀವಿಗೂ ಆರೋಗ್ಯದಿಂದ ಬದುಕಲು ಪೂರಕವಾದ ಆಹಾರ, ಔಷಧವನ್ನು ಪ್ರಕೃತಿ ಪೂರೈಸುತ್ತದೆ. ವಾಣಿಜ್ಯ ಮನೋಭಾವದಿಂದ ಹೆಚ್ಚು ಉತ್ಪಾದನೆಯ ಹಪಾಹಪಿಯಲ್ಲಿ ತರಕಾರಿ, ಹಾಲು, ಹಣ್ಣು, ಔಷಧಕ್ಕೆ ಬಳಸುವ ಶುಂಠಿಯೂ ಸೇರಿ ಎಲ್ಲವನ್ನೂ ವಿಷಮಯ ಮಾಡಿದ್ದೇವೆ. ಕ್ಯಾನ್ಸರ್​ನಂಥ ಗುಣಪಡಿಸಲಾಗದ ಕಾಯಿಲೆಗಳಿಗೆ ತುತ್ತಾಗಿ ಮನುಷ್ಯ ಇಂದು ವಿಷ ವರ್ತುಲದಲ್ಲಿ ಸಿಲುಕಿ ತೊಳಲಾಡುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ತರಕಾರಿ ಬೆಳೆದ ರೈತರೇ ತಾವು ಬೆಳೆದ ತರಕಾರಿಯನ್ನು ತಿನ್ನದಿರುವ ಸ್ಥಿತಿ ಇರುವುದು ದುರಂತ. ರೈತರು ಬಳಕೆದಾರರ ಬಗೆಗಿನ ಕಾಳಜಿ ಇಲ್ಲದೆ ಕೇವಲ ಹಣದಾಸೆಗೆ ಬಿದ್ದು ಇಂತಹ ಕೆಲಸಕ್ಕೆ ಮುಂದಾಗಿರುವುದು ವಾಸ್ತವ ಸಂಗತಿ. ಇಂತಹ ದುರಂತಗಳಿಂದಾಗಿ ಕ್ಯಾನ್ಸರ್​ನಂತಹ ಭೀಕರ ರೋಗಗಳು ಜನರನ್ನು ಬಾಧಿಸುತ್ತಿದೆ. ತಪಾಸಣೆ ನಡೆಸಿದರೆ ಪ್ರತಿ ಹತ್ತು ಮನೆಗೆ ಒಬ್ಬ ಕ್ಯಾನ್ಸರ್​ ರೋಗಿ ಸಿಗುತ್ತಾರೆ. ಈ ಬಗ್ಗೆ ಪ್ರತಿಯೊಬ್ಬರೂ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ ಎಂದರು.
ಗ್ರಾಪಂ ಮಾಜಿ ಸದಸ್ಯರಾದ ಶ್ರೀಧರ್​, ರಾವೇಂದ್ರ, ಆಶಾ, ಮಧುಕುಮಾರ್​, ಡಾ. ನಿತೀಶ್​, ಪಿಡಿಒ ರಮೇಶ್​ ಇದ್ದರು.