ಸಾಗರದಲ್ಲಿ ಆಯೋಜಿಸಿದ್ದ ಜಾನಪದ ಸಮಾವೇಶದಲ್ಲಿ ಸಾಧಕರಾದ ಸುನಂದಾ ಶ್ರೀಧರ್, ಜ್ಯೋತಿ ಸ್ವಾಮಿ, ಬಿ.ಟಾಕಪ್ಪ ಮತ್ತು ಸುನಂದಾ ಶಶಿಭೂಷಣ್ ಅವರನ್ನು ಸನ್ಮಾನಿಸಲಾಯಿತು. ಡಾ. ಜಿ.ಸಣ್ಣಹನುಮಪ್ಪ, ಅಬಸೆ ದಿನೇಶಕುಮಾರ ಜೋಷಿ, ಚೂಡಾಮಣಿ ರಾಮಚಂದ್ರ ಇತರರಿದ್ದರು.
- ಪ್ರಾಚಾರ್ಯ ಡಾ. ಜಿ.ಸಣ್ಣಹನುಮಪ್ಪ ಅಭಿಮತ
- ಸಾಗರದಲ್ಲಿ ಸ್ನೇಹಸಾಗರ ಜಾನಪದ ಮಹಿಳಾ ಡೊಳ್ಳು ತಂಡದ ರಜತ ಮಹೋತ್ಸವ
- ಜಾನಪದ ಕಲಾಪ್ರಕಾರ ಉಳಿಯಲು ಪ್ರಯತ್ನ ಅವಶ್ಯ
ಸಾಗರ: ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಜಿ.ಸಣ್ಣಹನುಮಪ್ಪ ಹೇಳಿದರು.
ಸಾಗರದ ಶೃಂಗೇರಿ ಶಂಕರಮಠದಲ್ಲಿ ಸ್ನೇಹಸಾಗರ ಜಾನಪದ ಮಹಿಳಾ ಡೊಳ್ಳು ತಂಡದ ರಜತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಜಾನಪದ ಸಮಾವೇಶದಲ್ಲಿ ಮಹಿಳೆ ಮತ್ತು ಜನಪದ ಕುರಿತು ಮಾತನಾಡಿ, ರಾಜ್ಯದಲ್ಲಿ ನೂರಾರು ಜಾನಪದ ಕಲೆಗಳಿದ್ದು, ಮೌಖಿಕ ವೃತ್ತಿ ಗಾಯಕ, ಲೌಖಿಕ ವೃತ್ತಿ ಗಾಯಕ ಕಲೆಗಳಿವೆ. ಜಾನಪದ ಕಲೆ ಪೋಷಿಸಿಕೊಂಡು ಮುನ್ನಡೆಯಬೇಕು ಎಂದು ತಿಳಿಸಿದರು.
ಗ್ರಾಮೀಣ ಮಹಿಳೆಯರು ಅನುಭವದ ಗಟ್ಟಿತನದ ಮೂಲಕವೇ ಜನಪದ ನೀಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕಲೆಯ ಸಾಹಿತ್ಯ, ಸಂಗೀತ, ಸಂಸ್ಕೃತಿ ಬಗ್ಗೆ ಅಪಾರ ತಿಳಿದುಕೊಂಡ ಜನರಿದ್ದಾರೆ. ಅವರ ಅನುಭವಗಳ ಮೇಲೆ ಅಧ್ಯಯನವಾಗಬೇಕಾದ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ಆಗಬೇಕು ಎಂದರು.
ರಾಜ್ಯದ ಬೇರೆ ಭಾಗದಲ್ಲಿ ಮಹಿಳೆಯರು ಜಾನಪದ ಕಲೆಯಲ್ಲಿ ತೊಡಗಿಸಿಕೊಳ್ಳುವುದು ವಿರಳ. ಅದರಲ್ಲಿಯೂ ಡೊಳ್ಳು ಕುಣಿತವನ್ನು ಮಲೆನಾಡು ಭಾಗದ ಮಹಿಳೆಯರು ಕರಗತ ಮಾಡಿಕೊಂಡಿದ್ದಾರೆ. ಜಾನಪದ ಕಲೆ ಉಳಿಯಬೇಕಾದರೆ ಎಲ್ಲ ದಿಕ್ಕುಗಳಿಂದಲೂ ಪ್ರಯತ್ನ ನಡೆಯಬೇಕು. ಈ ನಿಟ್ಟಿನಲ್ಲಿ ಮಹಿಳೆಯರು ಜಾನಪದ ಕಲಾಲೋಕ ಪ್ರವೇಶ ಅನಿವಾರ್ಯ ಎಂದು ತಿಳಿಸಿದರು.
ಕಲಾಪ್ರಕಾರಕ್ಕೆ ಅಪಚಾರ ಮಾಡದಿರಿಆಧುನೀಕರಣ ಹೆಸರಿನಲ್ಲಿ ಜಾನಪದ ಕಲೆಯ ಮೂಲವನ್ನು ಕೆಡಿಸುವ ಕೆಲಸ ಮಾಡಬಾರದು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಬಿ.ಟಾಕಪ್ಪ ಹೇಳಿದರು. ಜಾನಪದ ಸಮಾವೇಶ ಉದ್ಘಾಟಿಸಿ ಮಾತನಾಡಿ, ಹೊಸದಾಗಿ ಜಾನಪದ ಕ್ಷೇತ್ರ ಪ್ರವೇಶಿಸುವರು ಅದರ ಬಗ್ಗೆ ಅರಿವು ಹೊಂದಿರಬೇಕು. ನಮ್ಮ ಕಲೆಗೆ ಅಪಚಾರ ಆಗದಂತೆ ನೋಡಿಕೊಳ್ಳಬೇಕು. ಒಂದು ಕಾಲದಲ್ಲಿ ಧಾರ್ಮಿಕಕ್ಕೆ ಸೀಮಿತವಾಗಿದ್ದ ಡೊಳ್ಳು ಇಂದು ವಿಶ್ವಮಾನ್ಯವಾಗಿದೆ. ಚೂಡಾಮಣಿ ರಾಮಚಂದ್ರ ನೇತೃತ್ವದ ಡೊಳ್ಳು ತಂಡ 25 ವರ್ಷ ತಂಡವೊಂದನ್ನು ನಡೆಸಿಕೊಂಡು ಬರುತ್ತಿದ್ದಾರೆ. ಯುವಜನರು ಆಧುನಿಕದತ್ತ ವಾಲುತ್ತಿರುವ ಇಂತಹ ದಿನಗಳಲ್ಲಿ ಬದುಕು ಮತ್ತು ಪ್ರಕೃತಿ ಮಹತ್ವವನ್ನು ಪರಿಚಯಿಸುವ ಜನಪದವನ್ನು ಅವರಿಗೆ ತಿಳಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.
ಸಾಧಕರಾದ ಸುನಂದಾ ಶ್ರೀಧರ್, ಜ್ಯೋತಿ ಸ್ವಾಮಿ, ಬಿ.ಟಾಕಪ್ಪ, ಸುನಂದಾ ಶಶಿಭೂಷಣ್ ಅವರನ್ನು ಸನ್ಮಾನಿಸಲಾಯಿತು. ಚೂಡಾಮಣಿ ರಾಮಚಂದ್ರ ಅವರು ಸಂಸ್ಥೆ ನಡೆದು ಬಂದ ದಾರಿ ವಿವರಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿವಿಧೆಡೆಗಳಿಂದ ಬಂದಿದ್ದ ಮಹಿಳಾ ಸಂಘಟನೆಗಳು ಜಾನಪದ ನೃತ್ಯ ಮತ್ತು ಗೀತೆಗಳ ಪ್ರದರ್ಶನ ನಡೆಸಿಕೊಟ್ಟರು. ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಮತ್ತಿತರರು ಹಾಜರಿದ್ದರು.
ಜಾನಪದ ಕಲೆ ಅತ್ಯಂತ ಶ್ರೇಷ್ಠ ಕಲಾಪ್ರಕಾರಗಳಲ್ಲಿ ಒಂದಾಗಿದೆ. ಮಹಿಳೆಯರು ಸಹ ಗಂಡುಮೆಟ್ಟಿನ ಕಲೆ ಕರಗತ ಮಾಡಿಕೊಂಡು ವೇದಿಕೆ ಮೇಲೆ ಪ್ರದರ್ಶನ ಮಾಡಬಹುದು ಎನ್ನುವುದನ್ನು ಸ್ನೇಹಸಾಗರ ಜಾನಪದ ಮಹಿಳಾ ಡೊಳ್ಳು ತಂಡ ತೋರಿಸಿಕೊಟ್ಟಿದೆ. ತಂಡವು 25 ವರ್ಷ ಪೂರೈಸಿರುವುದು ಹೆಮ್ಮೆಯ ಸಂಗತಿ.