ಶಿವಮೊಗ್ಗದ ಕೃಷಿ ಹಾಗೂ ತೋಟಗಾರಿಕೆ ವಿವಿಯಲ್ಲಿ ಪುಷ್ಪ ಕೃಷಿ ಮತ್ತು ಭೂ ದೃಶ್ಯ ತೋಟಗಾರಿಕೆ-2047 ವಿಕಸಿತ ಭಾರತ ವಿಷಯ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಡಾ. ಸುರೇಶ್‌ಕುಮಾರ್ ಮಲ್ಹೋತ್ರಾ ಉದ್ಘಾಟಿಸಿದರು. ಡಾ. ಆರ್.ಸಿ.ಜಗದೀಶ್, ಎಚ್.ಎಸ್.ಶಶಾಂಕ್, ಎಚ್.ಡಿ.ದೇವಿಕುಮಾರ್ ಇತರರಿದ್ದರು.
- ಪ್ರಮುಖ ಸೇವಾ ವಲಯ ಆಗಿ ಗುರುತಿಸಿರುವ ಕೇಂದ್ರ ಸರ್ಕಾರ
- ಎಂಎಚ್‌ಯು ಕುಲಪತಿ ಡಾ. ಸುರೇಶ್‌ಕುಮಾರ್ ಮಲ್ಹೋತ್ರಾ ಹೇಳಿಕೆ
- ಶಿವಮೊಗ್ಗದಲ್ಲಿ ರಾಷ್ಟ್ರೀಯ ಸಮ್ಮೇಳನ
ಶಿವಮೊಗ್ಗ: ಪುಷ್ಪ ಕೃಷಿ ಭಾರತ (india) ದ ಪ್ರಮುಖ ಔದ್ಯೋಗಿಕ ಕ್ಷೇತ್ರವಾಗಿದ್ದು, ಪೂರಕವಾದ ವಾತಾವರಣವೂ ಇದೆ. ಪುಷ್ಪಕೃಷಿಯನ್ನು ಕೇಂದ್ರ ಸರ್ಕಾರ (goverment) ಪ್ರಮುಖ ಸೇವಾ ವಲಯ ಎಂದು ಗುರುತಿಸಿ ಮನ್ನಣೆ ನೀಡಿದೆ ಎಂದು ಹರಿಯಾಣ (hariyana) ಎಂಎಚ್‌ಯು ಕುಲಪತಿ ಡಾ. ಸುರೇಶ್ ಕುಮಾರ್ ಮಲ್ಹೋತ್ರಾ ಹೇಳಿದರು.
ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿವಿಯಲ್ಲಿ ವಿವಿಧ ವಿಭಾಗಗಳ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಪುಷ್ಪ ಕೃಷಿ ಮತ್ತು ಭೂ ದೃಶ್ಯ ತೋಟಗಾರಿಕೆ-2047 ವಿಕಸಿತ ಭಾರತ ವಿಷಯ ಕುರಿತ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ವಾತಾವರಣದಲ್ಲಿನ ಕಾರ್ಬನ್ ಡೈಆಕ್ಸೈಡ್ ಹಿರಿ ಉತ್ತಮ ಆಮ್ಲಜನಕವನ್ನು ನೀಡುವ ಸಾಮರ್ಥ್ಯ ಅಲಂಕಾರಿಕ ಸಸ್ಯಗಳಿಗೆ ಇದೆ. ಹೀಗಾಗಿ ಇವುಗಳನ್ನು ಅತ್ಯುತ್ತಮ ಪರಿಸರ ಸೇವೆ ನೀಡುತ್ತಿರುವ ಅಲಂಕಾರಿಕ ತೋಟಗಾರಿಕೆ ಎಂದೂ ಕರೆಯಲಾಗುತ್ತದೆ. ಈ ವಲಯದ ಬಗ್ಗೆ ಹೆಚ್ಚಿನ ಚರ್ಚೆ ಹಾಗೂ ಅಧ್ಯಯನ ಅವಶ್ಯ ಎಂದು ಅಭಿಪ್ರಾಯಪಟ್ಟರು.
2047ಕ್ಕೆ ವಿಕಸಿತ ಭಾರತ ಎಂಬುದು ಕೇಂದ್ರ ಸರ್ಕಾರದ ಪ್ರಮುಖ ಅಜೆಂಡಾ. ಎಲ್ಲ ಕ್ಷೇತ್ರಗಳಲ್ಲೂ ದೇಶ ಬಲಾಢ್ಯವಾಗಿ ಹೊರಹೊಮ್ಮಬೇಕು ಎಂಬುದು ಉದ್ದೇಶ. ಈ ದೃಷ್ಟಿಯಲ್ಲಿ ಪುಷ್ಪ ಕೃಷಿ ಹಾಗೂ ಭೂ ದೃಶ್ಯ ತೋಟಗಾರಿಕೆ ಹೆಚ್ಚು ಅವಕಾಶಗಳನ್ನು ಹೊಂದಿದೆ. ವ್ಯಾಪಕ ಪ್ರಚಾರ ಹಾಗೂ ಪ್ರೋತ್ಸಾಹದ ಅವಶ್ಯಕತೆಯಿದೆ ಎಂದರು.
ಎಲ್ಲ ಕ್ಷೇತ್ರಗಳಂತೆ ಪುಷ್ಪ ಕೃಷಿಯೂ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಬದಲಾದ ಹವಾಮಾನ ವ್ಯವಸ್ಥೆಯಿಂದ ಕೃಷಿ, ತೋಟಗಾರಿಕೆ ಹಾಗೂ ಪುಷ್ಪ ಕೃಷಿ ಕ್ಷೇತ್ರಗಳು ನಲುಗುತ್ತಿವೆ. ಸಂಸ್ಕರಣೆ ಸಂದರ್ಭದಲ್ಲೇ ಅಕಾಲಿಕವಾಗಿ ಮಳೆ ಸುರಿಯುವುದು ಇಲ್ಲವೇ ಮಳೆ ಅವಶ್ಯಕತೆಯಿದ್ದಾಗ ಪ್ರಕರವಾಗಿ ಬಿಸಿಲು ಬೀಳುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇಂದು ಗ್ರೀನ್ ಹೌಸ್ ಅನಿಲದ ಪರಿಣಾಮ ಹೆಚ್ಚಾಗುತ್ತಿದೆ. ಇದರ ಪ್ರಮಾಣ ತಗ್ಗಿಸುವುದು ಕೂಡ ಸವಾಲಿನ ಕೆಲಸ. ಮಣ್ಣಿನ ಫಲವತ್ತತೆ ಹೆಚ್ಚಿಸುವುದು, ಬೀಜದ ಗುಣಮಟ್ಟ ಕಾಯ್ದುಕೊಳ್ಳುವುದು ಅವಶ್ಯ. ಕೃಷಿಯಲ್ಲಿ ಎಐ ಬಳಕೆ, ಆಧುನಿಕ ಯಂತ್ರೋಪಕರಣಗಳ ಉಪಯೋಗ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ವೈಎಸ್‌ಆರ್ ತೋಟಗಾರಿಕಾ ವಿವಿ ನಿಕಟಪೂರ್ವ ಕುಲಪತಿ ಡಾ. ಟಿ.ಜಾನಕಿರಾಮ್, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್, ಐಸಿಎಆರ್-ಐಎಆರ್‌ಐ ನಿಕಟಪೂರ್ವ ಡೀನ್ ಡಾ. ಎಸ್.ಎಸ್.ಸಿಂಧು, ಆಡಳಿತ ಮಂಡಳಿ ಸದಸ್ಯ ಡಾ. ಬಸವರಾಜ್, ಡಾ. ಬಿ.ಕೆ.ಕುಮಾರಸ್ವಾಮಿ, ಎಚ್.ಡಿ.ದೇವಿಕುಮಾರ್, ಜೆ.ಜಿ.ಕಾವೇರಿಯಪ್ಪ, ಎಚ್.ಎಸ್.ಶಶಾಂಕ್ ಇದ್ದರು.
ಕೌಶಲ ಹೆಚ್ಚಳ, ರೈತರ ಆದಾಯ ದ್ವಿಗುಣ, ಮಹಿಳಾ ಸಬಲೀಕರಣ, ಉದ್ಯಮಶೀಲತೆಯ ಅಭಿವೃದ್ಧಿಗೆ ತೋಟಗಾರಿಕೆ ವಲಯ, ಪುಷ್ಪ ಕೃಷಿ ಹೆಚ್ಚು ಸೂಕ್ತವಾಗಿದೆ ಎಂದು ಡಾ. ಟಿ.ಜಾನಕಿರಾಮ್ ಅಭಿಪ್ರಾಯಪಟ್ಟರು. ದೇಶದಲ್ಲಿ ಪ್ರಸ್ತುತ 371 ಮಿಲಿಯನ್ ಟನ್, ತೋಟಗಾರಿಕಾ ಉತ್ಪನ್ನಗಳನ್ನು ಬೆಳೆಯಲಾಗುತ್ತಿದೆ. ತಂತ್ರಜ್ಞಾನ ಅಭಿವೃದ್ದಿ, ಸರ್ಕಾರದ ನಿಯಮಗಳು, ರೈತರ ಭಾಗವಹಿಸುವಿಕೆ, ರೈತ ಕೇಂದ್ರಗಳ ಸಹಕಾರದಿಂದ ಅಭಿವೃದ್ದಿ ಸಾಧ್ಯವಾಗಿದೆ. ಸಾರ್ಟಪ್ ವಲಯದಲ್ಲಿ ಪುಷ್ಪ ಕೃಷಿ ಹೆಚ್ಚು ಗಮನಸೆಳೆದಿದೆ. ವಿದ್ಯಾರ್ಥಿಗಳು ಉದ್ಯೋಗದಾತರಾಗಿ ಹೊರಹೊಮ್ಮಲು ಪುಷ್ಪ ಕೃಷಿ ಸಹಕಾರಿಯಾಗಿದೆ ಎಂದರು.
ವಿಶ್ವದಲ್ಲಿ ಎರಡನೇ ಸ್ಥಾನ
ಪುಷ್ಪ ಕೃಷಿಯಲ್ಲಿ ಚೀನಾದ ನಂತರ ಭಾರತ ವಿಶ್ವದಲ್ಲೇ ಎರಡನೇ ದೊಡ್ಡ ದೇಶವಾಗಿದೆ. 2.97 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಪುಷ್ಪ ಕೃಷಿ ಮಾಡಲಾಗುತ್ತಿದೆ. ಜಾಗತಿಕವಾಗಿ ಮಿಲಿಯನ್ ಡಾಲರ್ ಉದ್ಯಮವನ್ನು ಈ ವಲಯ ಹೊಂದಿದೆ ಎಂದು ಶಿವಮೊಗ್ಗದ ಕೃಷಿ ವಿವಿ ಶೈಕ್ಷಣಿಕ ನಿರ್ದೇಶಕ ಡಾ. ಬಿ.ಹೇಮ್ಲಾನಾಯ್ಕಾ ಹೇಳಿದರು. ಪುಷ್ಪ ಕೃಷಿಯಲ್ಲಿ ಭಾರತದ ವಹಿವಾಟು ಎರಡು ಸಾವಿರ ಕೋಟಿ ರೂ. ಆಗಿದೆ. ರಾಜ್ಯದ ಹಲವು ಜಿಲ್ಲೆಗಳು ತಮ್ಮದೇ ಆದ ವಿಶೇಷ ಪುಷ್ಪ ಕೃಷಿಯನ್ನು ಗುರುತಿಸಿಕೊಂಡಿವೆ. ಹೂವಿನಹಡಗಲಿ ಮಲ್ಲಿಗೆ, ಮೈಸೂರು ಮಲ್ಲಿಗೆ, ಶಂಕರಪುರ ಮಲ್ಲಿಗೆ ಜಿಐ ಟ್ಯಾಗ್ ಪಡೆದುಕೊಂಡಿವೆ. ಕರ್ನಾಟಕವನ್ನು ಭಾರತದ ವಾಣಿಜ್ಯ ಪುಷ್ಪ ಕೃಷಿಯ ರಾಜಧಾನಿ ಎಂದೇ ಕರೆಯಲಾಗುತ್ತದೆ. ಅಂತಾರಾಷ್ಟ್ರೀಯ ಗುಣಮಟ್ಟದ ಹೂವುಗಳನ್ನು ವೈಜ್ಞಾನಿಕವಾಗಿ ಬೆಳೆದು ರಫ್ತು ಮಾಡುವ ಬೃಹತ್ ಉದ್ಯಮವಾಗಿ ಕರ್ನಾಟಕ ಗುರುತಿಸಿಕೊಂಡಿದೆ ಎಂದರು.
ಹಲವರಿಗೆ ಪ್ರಶಸ್ತಿ
ಭಾರತೀಯ ಅಲಂಕಾರಿಕ ತೋಟಗಾರಿಕೆ ಸಂಘದಿಂದ ಐವರು ಪುಷ್ಪ ಕೃಷಿ ವಿಜ್ಞಾನಿಗಳಿಗೆ ಫೆಲೋಶಿಪ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇಬ್ಬರು ಪಿಎಚ್.ಡಿ ವಿದ್ಯಾರ್ಥಿಗಳ ಸಂಶೋಧನಾ ಪ್ರಬಂಧಕ್ಕೆ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿ ನೀಡಲಾಯಿತು. ನಾಲ್ವರು ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಶೋಧನಾ ಪ್ರಬಂಧಕ್ಕೆ ಅತ್ಯುತ್ತಮ ಪ್ರಬಂಧ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.