ಸೊರಬ ತಾಲೂಕು ತಲಗಡ್ಡೆ ಗ್ರಾಮದ ದೊಡ್ಡಕೆರೆಯಲ್ಲಿ ಮೀನು ಬೇಟೆಯಲ್ಲಿ ನಿರತರಾಗಿದ್ದ ಬೇಟೆಗಾರರು. 
ಶಿವಮೊಗ್ಗ

ತಲಗಡ್ಡೆ ಕೆರೆಯಲ್ಲಿ ಮೀನು ಬೇಟೆ | fish hunting

ಸೊರಬ: ತಾಲೂಕಿನ ಜಡೆ ಹೋಬಳಿ ತಲಗಡ್ಡೆ ಗ್ರಾಮದ ದೊಡ್ಡಕೆರೆಯಲ್ಲಿ ಭಾನುವಾರ ಮಲೆನಾಡಿನ ಜನಪದ ಕ್ರೀಡೆ ಮೀನು ಶಿಕಾರಿ ಭರ್ಜರಿಯಾಗಿ ನಡೆಯಿತು.
ಕೆರೆ ಬೇಟೆ ತಾಲೂಕಿನ ಉಳವಿ, ಕುಪ್ಪಗಡ್ಡೆ ಮತ್ತು ಕಸಬಾ ಹೋಬಳಿಗಳ ವ್ಯಾಪಿಯಲ್ಲಿ ಹೆಚ್ಚು ಕಂಡುಬರುತ್ತಿತ್ತು. ಆದರೆ ಈ ಬಾರಿ ತಾಲೂಕಿನ ಎಲ್ಲೆಡೆ ಕೆರೆಬೇಟೆಯ ಸಂಭ್ರಮ ಮನೆಮಾಡಿರುತ್ತದೆ. ತಲಗಡ್ಡೆಯ ಊರ ಮುಂದಿನ ಕೆರೆ ತಾಲೂಕಿನ ದೊಡ್ಡ ಕೆರೆಗಳಲ್ಲಿ ಒಂದು. 111 ಎಕರೆ ವಿಸ್ತೀರ್ಣ ಇರುವ ಈ ಕೆರೆಯ ಅರ್ಧದಷ್ಟು ಭಾಗದಲ್ಲಿ ನೀರಿತ್ತು. ಶನಿವಾರ ರಾತ್ರಿ ಸುರಿದ ಮಳೆಯಿಂದ ಇನ್ನಷ್ಟು ನೀರು ತುಂಬಿಕೊಂಡಿತ್ತು. 1977ರಿಂದ ಈ ಕೆರೆಯಲ್ಲಿ ಮೀನು ಶಿಕಾರಿಯೇ ನಡೆದಿರಲಿಲ್ಲ. ಹಾಗಾಗಿ ಭಾರಿ ಮೀನುಗಳು ಇರುತ್ತವೆ ಎಂದು ಬೇಟೆಗಾರರು ಬಂದಿದ್ದರು. ಆದರೆ ಕೆರೆಯಲ್ಲಿ ದೊಡ್ಡ ಗಾತ್ರದ ಅಂದರೆ 8, 10, 15, 20 ಕೆ.ಜಿ. ತೂಕ ಮೀನುಗಳು ಇದ್ದು ಕೆಲವೇ ಜನರಿಗೆ ಸಿಕ್ಕಿವೆ. ಸಣ್ಣ ಮೀನುಗಳು ವಿರಳವಾಗಿದ್ದರಿಂದ ಬಹಳಷ್ಟು ಮಂದಿ ಬರಿಗೈಲಿ ನಿರಾಸೆಯಿಂದ ವಾಪಸ್ ತೆರಳಿದರು.
ಮೀನು ಬೇಟೆಗಾಗಿ ಸಮವಸ್ತ್ರ ನೀಡಲಾಗಿತ್ತು. ಟಿಕೆಟ್ ಪಡೆದವರಿಗೆ ಒಂದು ಬಿಳಿ ಟಿ-ಶರ್ಟ್ ಕೊಟ್ಟು ಅವರನ್ನು ಗುರುತಿಸಲಾಗುತ್ತಿತ್ತು. ಟಿಕೆಟ್ ಪಡೆಯದವರು ನಿಲ್ಲಲು ಕರೆಯ ಅಂಗಳದಲ್ಲಿ ಹಗ್ಗದಿಂದ ಬ್ಯಾರಿಕೇಡ್ ಮಾಡಿದ್ದರು. ಮಧ್ಯಾಹ್ನ 12 ಗಂಟೆಗೆ ಕೆರೆಗೆ ಇಳಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ 11.40ರ ವೇಳೆಗೆ ಏಕಾಏಕಿ ಬೇಟೆಗಾರರು ಕೆರೆಗೆ ನುಗ್ಗಿದರು. ಅದನ್ನು ನೋಡಿದ ಕೆರೆಯ ದಡದಲ್ಲಿದ್ದ ಟಿಕೆಟ್ ಪಡೆಯದವರೂ ನುಗ್ಗುವ ಮೂಲಕ ಗ್ರಾಮಸ್ಥರು ನಿಗದಿಪಡಿಸಿದ್ದ ನಿಯಮಗಳನ್ನು ಉಲ್ಲಂಘಿಸಿದರು. ಎಷ್ಟು ತಡೆದರೂ ಪ್ರವೇಶ ಶುಲ್ಕ ವಸೂಲಿ ಮಾಡಲು ಆಗಲಿಲ್ಲ. ಕೆರೆಗೆ 1000 ಕೂಣಿ ಮಾತ್ರ ನಿಗದಿಪಡಿಸಲಾಗಿತ್ತು. ಆದರೆ 500 ಕೂಣಿ ಹೆಚ್ಚುವರಿ ಇದ್ದವು ಎನ್ನಲಾಗಿದೆ.
ಒಂದು ಕೂಣಿಗೆ 600 ರೂ. ನಿಗದಿ ಮಾಡಲಾಗಿತ್ತು. ಗ್ರಾಮದವರು ಮಾತ್ರವಲ್ಲದೆ ಸಾಗರ, ತ್ಯಾಗರ್ತಿ, ಸಿದ್ದಾಪುರ, ಆನವಟ್ಟಿ, ಶಿರಾಳಕೊಪ್ಪ ಭಾಗದದಿಂದಲೂ ಶಿಕಾರಿಗೆ ಆಗಮಿಸಿದ್ದರು. ಗ್ರಾಮ ಸಮಿತಿಯವರು ಯಾವುದೇ ಗಲಾಟೆ ಮತ್ತು ಗೊಂದಲಗಳಿಗೆ ಅವಕಾಶ ನೀಡದಂತೆ ಅಚ್ಚುಕಟ್ಟಾಗಿ ನಿರ್ವಹಿಸಿದರು. ಬಂದೋಬಸ್ತ್‌ಗೆ ಪೊಲೀಸರನ್ನು ನಿಯೋಜಿಸಲಾಗಿತ್ತು.