ಸೊರಬ ತಾಲೂಕಿನ ಚಿಟ್ಟೂರು ಗ್ರಾಮದ ಕೆರೆಯಲ್ಲಿ ವಿವಿಧ ಗ್ರಾಮಸ್ಥರ ಕೆರೆಬೇಟೆ ಸಂಭ್ರಮ. 
ಶಿವಮೊಗ್ಗ

ಚಿಟ್ಟೂರು ಗ್ರಾಮದಲ್ಲಿ ಮೀನು ಬೇಟೆ | Fish hunt

ಸೊರಬ: ತಾಲೂಕಿನ ಚಿಟ್ಟೂರು ಗ್ರಾಮದ ಕೆರೆಯಲ್ಲಿ ಮಲೆನಾಡಿನ ಜನಪದ ಕ್ರೀಡೆ ಮೀನು ಶಿಕಾರಿ(ಕೆರೆಬೇಟೆ) ಗುರುವಾರ ಭರ್ಜರಿಯಾಗಿ ನಡೆಯಿತು.
ಮಲೆನಾಡಿನ ಗ್ರಾಮೀಣ ಕ್ರೀಡೆಯಾಗಿರುವ ಕೆರೆಬೇಟೆಯಲ್ಲಿ ಪಾಲ್ಗೊಳ್ಳುವವರು ಏಕಕಾಲದಲ್ಲಿ ಕೆರೆಗೆ ಇಳಿದು ಮೀನುಗಳನ್ನು ಹಿಡಿಯುವುದನ್ನು ನೋಡಲು ನೂರಾರು ಜನ ಆಗಮಿಸುತ್ತಾರೆ. ಗ್ರಾಮದಲ್ಲಿ ಒಂದು ಕೂಣಿಗೆ 600 ರೂ. ನಿಗದಿ ಮಾಡಲಾಗಿತ್ತು.  ಮಳೆಗಾಲದ ಸಂದರ್ಭ ಕೆರೆಗಳಿಗೆ ಮೀನಿನ ಮರಿಗಳನ್ನು ಬಿಡಲಾಗುತ್ತದೆ. ನಂತರ ಬೇಸಿಗೆಯಲ್ಲಿ ಕೆರೆಗಳು ಬತ್ತಿದಾಗ ಕೆರೆಬೇಟೆ ಸಾರಲಾಗುತ್ತದೆ.
ಗ್ರಾಮದಲ್ಲಿ ನಡೆದ ಕೆರೆಬೇಟೆಯಲ್ಲಿ ಕೂಣಿ ಹಾಗೂ ಜರಡಿಬಲೆಗೆ ಅವಕಾಶ ಕಲ್ಪಿಸಲಾಗಿತ್ತು. ಗ್ರಾಮಸ್ಥರು ಮಾತ್ರವಲ್ಲದೆ ಸುತ್ತಲಿನ ಗ್ರಾಮದವರು ಸಹ ಪಾಲ್ಗೊಂಡಿದ್ದರು.  ಕೆಲವರಿಗೆ 10 ಕೆ.ಜಿ.ವರೆಗೆ ಮೀನು ಲಭಿಸಿತು. ಇಲ್ಲಿಯೂ ಸಹ ಬಿದರಿನ ಕೂಣಿ ಮತ್ತು ಕಬ್ಬಿಣದ ಕೂಣಿಗಳನ್ನು ಬಳಸಲಾಯಿತು. ಗ್ರಾಮ ಸಮಿತಿಯವರು ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ಅಚ್ಚುಕಟ್ಟಾಗಿ ನಿರ್ವಹಿಸಿದರು.