ಸೊರಬ ಸಮೀಪದ ಹಳೇ ಸೊರಬ ಕೆರೆಬೇಟೆಯಲ್ಲಿ ಪಾಲ್ಗೊಂಡಿದ್ದ ಜನರು.
ಸೊರಬ: ಪಟ್ಟಣದಿಂದ ಕೂಗಳತೆ ದೂರದಲ್ಲಿರುವ ಹಳೇ ಸೊರಬ ಗ್ರಾಮದ ದೊಡ್ಡಕೆರೆ ಬೇಟೆ ಭಾನುವಾರ ಸಂಭ್ರಮದಿಂದ ನಡೆಯಿತು. ಕೆರೆ ಬೇಟೆಯಲ್ಲಿ ಕೆಲವರು 10-15 ಕೆ.ಜಿ ವೀನು ಹಿಡಿದು ಖುಷಿಪಟ್ಟರೆ ಮತ್ತೆ ಕೆಲವರು ಮೀನು ಸಿಗದೆ ಹಣ ಕಳೆದುಕೊಂಡೆವಲ್ಲ ಎಂದು ಬೇಸರ ಮಾಡಿಕೊಂಡು ಮನೆಯ ಹಾದಿ ಹಿಡಿಯುವಂತಾಯಿತು.
ಹಳೇ ಸೊರಬದ ಕೆರೆಯಲ್ಲಿ ಮೀನುಗಳ ಸಂಖ್ಯೆ ಹೆಚ್ಚಾಗಿ ಇದೆ ಎಂದುಕೊಂಡು ಉತ್ಸಾಹದಿಂದ ತಾಲೂಕಿನ ವಿವಿಧ ಗ್ರಾಮಗಳಿಂದಲ್ಲದೆ, ಸಾಗರ, ಶಿಕಾರಿಪುರ ತಾಲೂಕುಗಳಿಂದಲೂ ಮೀನು ಹಿಡಿಯಲು ಬೇಟೆಗಾರರು ಬಂದಿದ್ದರು. ಒಂದು ಕೂಣಿಗೆ 800 ರೂ. ನಿಗದಿಪಡಿಸಲಾಗಿತ್ತು. ಇದು ದುಬಾರಿ ಎಂದು ಗೊತ್ತಿದ್ದರೂ ಹಣದ ಲೆಕ್ಕಚಾರ ಹಾಕದೆ ಗ್ರಾಮ ಸಮಿತಿಯವರು ನಿಗದಿಪಡಿಸಿದ್ದನ್ನು ಕೊಟ್ಟು ಇಳಿದ ಕೆಲವರು 10, 8, 7, 6 ಕೆ.ಜಿ ಗಾತ್ರದ ಮೀನು ಹಿಡಿದು ಹೇಗಲ ಮೇಲೆ ಹೊತ್ತು ಸಾಗಿದರು. ನ್ನೂ ಕೆಲವು ಮೀನು ಸಿಗದೆ ಹಣವನ್ನು ನೀರಿಗೆ ಹಾಕಿದೆವು ಎಂದು ಬೇಸರ ವ್ಯಕ್ತಪಡಿಸಿದರು. ಕೆರೆಬೇಟೆ ಕೂಡಾ ಒಂದು ಜೂಜಾಟ. ಇದರಲ್ಲಿ ಅದೃಷ್ಟ ಇರಬೇಕು ಎನ್ನುತ್ತಾರೆ ಬೇಟೆಗಾರರು.
ಎಲ್ಲ ಕೆರೆಗಳಲ್ಲಿ ಸಾಮಾನ್ಯವಾಗಿ ಕಾಟ್ಲಾ, ಹುಲ್ಲು ಗೆಂಡಿ, ರವೂ ಜಾತಿಯ ಮೀನುಗಳಿರುತ್ತಾರೆ. ಆದರೆ ಹಳೇ ಸೊರಬ ಕೆರೆಯಲ್ಲಿ ದೊಡ್ಡ ದೊಡ್ಡ ಗಾತ್ರದ ಮೀನು ಸಿಕ್ಕಿರುವುದು ಆಶ್ಚರ್ಯ. ಈ ಕೆರೆಯಲ್ಲಿ ವಿಶೇಷವಾಗಿ 10 ಕೆ.ಜಿ ಗಾತ್ರದ ಹಂದಿ ಮುರುಗೋಡು, 7 ಕೆ.ಜಿ ಗಾತ್ರದ ಬಾಳೆ ಮೀನುಗಳು, ಗೊಜಳೆ ಮತ್ತು ಹಾವು ಮೀನು ಸಿಕ್ಕದ್ದು ಕೂಡು ಅಚ್ಚರಿ ಉಂಟುಮಾಡಿತು. 1000 ಹೆಚ್ಚು ಕೂಣಿ ಬಂದಿದ್ದವು. ಕೆರೆಯ ಸುತ್ತಮುತ್ತ ಬಂದೋಬಸ್ತ್‌ಗೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಕೆರೆಬೇಟೆಯನ್ನು ಮಹಿಳೆಯರು ಸೇರಿ, ಆನವಟ್ಟಿ ಮಾರ್ಗದಲ್ಲಿ ಹೋಗುವ ವಾಹನ ಸಾವರರು ಕಣ್ತುಂಬಿಕೊಂಡರು.