ಮೀನು ಮರಿ ಸಾಕಣೆಗೆ ಶಿವಮೊಗ್ಗ ತಾಲೂಕಿನಲ್ಲಿ ನಿರ್ಮಾಣ ಮಾಡಿರುವ ಕೊಳ. 
ಶಿವಮೊಗ್ಗ

ಮೀನು ಮರಿ ಸಾಕಣೆದಾರರು ವಿಲವಿಲ! I fish growers

ಪ್ರಮುಖ ಮುಖ್ಯಾಂಶಗಳು

  • ಖರೀದಿ ಕೈಬಿಟ್ಟ ಆಡಳಿತ ಯಂತ್ರ
  • ಮಳೆ ಕೊರತೆಯಿಂದ ಖಾಸಗಿಯವರಿಂದಲೂ ಇಲ್ಲ ಬೇಡಿಕೆ
  • ಸಂಕಷ್ಟಕ್ಕೆ ಸಿಲುಕಿದೆ ಒಳನಾಡು ಮೀನುಗಾರಿಕೆ

ಅರವಿಂದ ಅಕ್ಲಾಪುರ ಶಿವಮೊಗ್ಗ

ಮಳೆ (rain) ಕೊರತೆಯಿಂದ ಕೃಷಿ ಹಾಗೂ ತೋಟಗಾರಿಕೆಗೆ ಹಿನ್ನಡೆಯಾಗಿರುವ ನಡುವೆ ಮೀನು (fish) ಸಾಕಣೆಗೂ ಸಂಕಷ್ಟ ಎದುರಾಗಿದೆ. ಇದರ ಜತೆ ಒಳನಾಡು ಮೀನುಗಾರಿಕೆಯನ್ನು ರಾಜ್ಯ ಸರ್ಕಾರ (goverment) ಸಂಪೂರ್ಣವಾಗಿ ನಿರ್ಲಕ್ಷಿೃಸಿರುವ ಪರಿಣಾಮ ಮೀನು ಮರಿ ಸಾಕಣೆದಾರರು ವಿಲವಿಲ ಒದ್ದಾಡುವಂತಾಗಿದೆ.
ಪ್ರತಿವರ್ಷ ಈ ಅವಧಿಯಲ್ಲಿ ಮೀನುಗಾರಿಕೆ ಇಲಾಖೆಯಿಂದ ಮೀನು ಮರಿ ಖರೀದಿಸಿ ಜಲಾಶಯಗಳಿಗೆ ಬಿಡಲಾಗುತ್ತಿತ್ತು. ಆದರೆ ಈ ವರ್ಷದ ಬಜೆಟ್‌ನಲ್ಲಿ ಹಣ ಮೀಸಲಿಡದ ಕಾರಣ ಮೀನು ಮರಿ ಸಾಕಣೆ ಮಾಡಿರುವವರು ವ್ಯಾಪಕ ನಷ್ಟ ಅನುಭವಿಸಬೇಕಾಗಿದೆ.
ಶಿವಮೊಗ್ಗ ತಾಲೂಕು ಹಾತಿಕಟ್ಟೆ, ಶೆಟ್ಟಿಹಳ್ಳಿ, ಬುಕ್ಲಾಪುರ ಕ್ಯಾಂಪ್, ಕಾಟಿಗೆರೆ, ಪದ್ಮೇನಹಳ್ಳಿ, ಮಾಳೇನಹಳ್ಳಿ, ಹಸೂಡಿ ಫಾರ್ಮ್ ಮುಂತಾದ ಕಡೆಗಳಲ್ಲಿ 650-700 ಜನರು ಮೀನು ಮರಿ ಸಾಕಣೆ ಮಾಡುತ್ತಿದ್ದಾರೆ. ಇದರಲ್ಲಿ 10 ಗುಂಟೆಯಿಂದ ಆರಂಭವಾಗಿ 15 ಎಕರೆ ಪ್ರದೇಶದಲ್ಲಿ ಕೊಳ ನಿರ್ಮಿಸಿಕೊಂಡು 15 ವರ್ಷಕ್ಕೂ ಹೆಚ್ಚು ಕಾಲದಿಂದ ಮೀನು ಮರಿ ಸಾಕಣೆ ಮಾಡಲಾಗುತ್ತಿದೆ.
ಒಂದೆಡೆ ಅನುದಾನ ಕೊರತೆಯಿಂದ ಮೀನುಗಾರಿಕೆ ಇಲಾಖೆ ಮೀನು ಮರಿ ಖರೀದಿಗೆ ನಿರಾಸಕ್ತಿ ತೋರುತ್ತಿದೆ. ಮಳೆ ಕಡಿಮೆ ಆಗಿರುವುದರಿಂದ ಮೀನು ಸಾಕಣೆ ಮಾಡುವವರು, ಕೆರೆಗಳನ್ನು ಗುತ್ತಿಗೆ ಪಡೆದವರು ಕೂಡ ಮರಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಈ ಬೆಳವಣಿಗೆ ಮೀನು ಮರಿ ಸಾಕಣೆದಾರರನ್ನು ಅಕ್ಷರಶಃ ಕಂಗಾಲಾಗಿಸಿದೆ.
2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ನಮ್ಮನ್ನು ಕಡೆಗಣಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಅನುದಾನ ಕಡಿಮೆ ಮಾಡಿದ ಸರ್ಕಾರ ಈ ವರ್ಷ ಚಿಕ್ಕಾಸನ್ನೂ ಬಿಡುಗಡೆ ಮಾಡಿಲ್ಲ. ನಮ್ಮ ಊರಿಗೆ ಯಾರಾದರೂ ಮೀನು ಮರಿ ಖರೀದಿಗೆ ಬಂದರೆ ಸಾಕು, ಹಾಕಿರುವ ಬಂಡವಾಳ ಮರಳಲಿ ಎಂದು ಖರೀದಿದಾರರನ್ನು ಎದುರು ನೋಡುವಂತಾಗಿದೆ ಎನ್ನುತ್ತಿದ್ದಾರೆ ಮೀನು ಮರಿ ಕೃಷಿಕರು.
"

ನಾನು 15 ಎಕರೆಯಲ್ಲಿ ಕೊಳ ನಿರ್ಮಿಸಿಕೊಂಡು ಪ್ರತಿ ವರ್ಷ ಮೀನುಮರಿ ಸಾಕಣೆ ಮಾಡುತ್ತಿದ್ದೆ. ವರ್ಷಕ್ಕೆ 2-3 ಕೋಟಿ ಮೀನು ಮರಿಗಳನ್ನು ಸರಬರಾಜು ಮಾಡುತ್ತಿದ್ದೆ. ಈ ವರ್ಷ ಮಳೆಯಿಲ್ಲದ ಕಾರಣ ನಾಲ್ಕು ಎಕರೆಯಲ್ಲಿ ಮೀನು ಕೃಷಿ ಮಾಡುತ್ತಿದ್ದೇನೆ. ಸರ್ಕಾರದ ನೀತಿಯಿಂದ ಈ ವರ್ಷ ತೀವ್ರ ಹಿನ್ನಡೆಯಾಗಿದೆ.

— ಮಂಜುನಾಥ್ ಮೀನು ಕೃಷಿಕ, ಬುಕ್ಲಾಪುರ


ನೀರಿಗೂ ತತ್ವಾರ

ಶಿವಮೊಗ್ಗ ಹಾಗೂ ಭದ್ರಾವತಿ ತಾಲೂಕಿನ ಭದ್ರಾ ಜಲಾಶಯದ ಎಡದಂಡೆ ನಾಲೆ ನೀರನ್ನು ನಂಬಿಕೊಂಡು ಇಷ್ಟು ವರ್ಷ ಮೀನು ಕೃಷಿ ಮಾಡುತ್ತಿದ್ದರು. ಈ ವರ್ಷ ಜಲಾಶಯದ ನೀರು ಕುಡಿಯುವುದಕ್ಕೆ ಮಾತ್ರ ಸೀಮಿತ ಎಂದು ಸರ್ಕಾರ ಅಧಿಸೂಚನೆ ಹೊರಡಿಸುವುದರಿಂದ ಮೀನು ಮರಿ ಸಾಕಣೆ ಕೊಳಗಳನ್ನು ತುಂಬಿಸಲು ಸಾಧ್ಯವಾಗುತ್ತಿಲ್ಲ. ಇದು ಎಲ್ಲ ಜಲಾಶಯಗಳ ಅಚ್ಚುಕಟ್ಟು ಪ್ರದೇಶದ ಮೀನು ಮರಿ ಸಾಕಣೆದಾರರ ಸಮಸ್ಯೆಯಾಗಿದೆ. ಇನ್ನೊಂದೆಡೆ ಮಳೆ ಕಡಿಮೆಯಾಗಿರುವುದರಿಂದ ಮೀನು ಮರಿ ಸಾಕಣೆಗೆ ಅವಶ್ಯವಾಗಿರುವ ನೀರಿಗೂ ತತ್ವಾರ ಎದುರಾಗಿದೆ.
"

ಮೀನು ಮರಿಗಳಿಗೆ ಪ್ರಮುಖ ಆಹಾರವಾಗಿರುವ ಶೇಂಗಾ ಹಿಂಡಿಯ 30 ಕೆಜಿ ಚೀಲದ ಬೆಲೆ 1,100 ರೂ.ನಿಂದ 1,800 ರೂ.ಗೆ ಏರಿಕೆಯಾಗಿದೆ. ಸೀಪೆ ಕಾಳು, ತೌಡು ಎಲ್ಲದರ ಬೆಲೆಯೂ ಹೆಚ್ಚಿದೆ. ವರ್ಷಕ್ಕೆ ಒಂದು ಎಕರೆಗೆ ಐದು ಲಕ್ಷ ರೂ. ಖರ್ಚಾಗುತ್ತದೆ. ಸರ್ಕಾರ ನಮ್ಮಿಂದ ಮೀನು ಮರಿ ಖರೀದಿಸಿದರೆ ನಾವು ಗರಿಷ್ಠ ಒಂದು ಲಕ್ಷ ರೂ. ಲಾಭ ಗಳಿಸಬಹುದಷ್ಟೇ.

— ಕೃಷ್ಣಮೂರ್ತಿ ಮೀನು ಮರಿ ಕೃಷಿಕ, ಹಾತಿಕಟ್ಟೆ

ನಂಬಿಸಿ ಕೈಕೊಟ್ಟ ಸರ್ಕಾರ

ಆರಂಭದ ದಿನಗಳಲ್ಲಿ ಒತ್ತಾಯಪೂರ್ವಕವಾಗಿ ಮೀನು ಮರಿ ಕೃಷಿಯತ್ತ ಜನರನ್ನು ಕರೆದುಕೊಂಡು ಬಂದ ಸರ್ಕಾರ ಈಗ ಕೈಕೊಟ್ಟಿದೆ. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಸಂದರ್ಭದಲ್ಲಿ ಮೀನು ಮರಿ ಖರೀದಿಗೆಂದು ಬಜೆಟ್‌ನಲ್ಲಿ 20 ಕೋಟಿ ರೂ. ಮೀಸಲಿಟ್ಟಿದ್ದರು. ಆಗ ಪ್ರತಿಯೊಬ್ಬ ಮೀನು ಸಾಕಣೆದಾರರಿಂದ ಸರ್ಕಾರ ವರ್ಷಕ್ಕೆ ಎರಡು ಲಕ್ಷ ಮರಿಗಳನ್ನು ಖರೀದಿ ಮಾಡುತ್ತಿತ್ತು. ಬಳಿಕ ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನ ಎರಡು ಕೋಟಿ ರೂ.ಗೆ ಇಳಿಕೆಯಾಗಿತ್ತು. 30-40 ಸಾವಿರ ಮೀನು ಮರಿಗಳನ್ನು ಪ್ರತಿ ಸಾಕಣೆದಾರರಿಂದ ಖರೀದಿ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಮರಿ ಖರೀದಿಗೆ ಇಲಾಖೆಗೆ ಅನುದಾನವನ್ನೇ ಬಿಡುಗಡೆ ಮಾಡಿಲ್ಲ.

ಯಾವ ತಳಿ ಖರೀದಿ?

ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಮೈಸೂರು, ಮಂಡ್ಯ, ರಾಯಚೂರು, ಹೊಸಪೇಟೆ ಭಾಗದಲ್ಲಿ ಮೀನು ಕೃಷಿ ಹೆಚ್ಚಿದೆ. ಮೀನುಗಾರಿಕೆ ಇಲಾಖೆ ಇಷ್ಟು ವರ್ಷ ಕಟ್ಲಾ, ರೋಹು, ಮೃಗಾಲ್, ಗ್ಲಾಸ್ಕಾರ್ಪ್, ಸಾಮಾನ್ಯ ಗೆಂಡೆ ತಳಿಗಳ ಮೀನು ಮರಿಗಳನ್ನು ಖರೀದಿ ಮಾಡಿ ರಾಜ್ಯದ 40-45 ಡ್ಯಾಂಗಳಿಗೆ ಮಳೆಗಾಲದ ಆರಂಭದಲ್ಲಿ ಬಿಡುತ್ತಿತ್ತು. ಇವುಗಳಿಗೆ ಸಾಗಣೆ ವೆಚ್ಚವೂ ಸೇರಿದಂತೆ ಪ್ರತಿ ಮರಿಗೆ 1.20 ರೂ.ನಿಂದ 1.50 ರೂ. ನೀಡಲಾಗುತ್ತಿತ್ತು.
"

ರಾಜ್ಯ ಸರ್ಕಾರದ ನೀತಿಯಿಂದ ನಾನು ಪ್ರತಿನಿಧಿಸುವ ಜಿಲ್ಲೆಯಲ್ಲಿ ಮೀನು ಕೃಷಿಕರು ಸಂಕಷ್ಟಕ್ಕೆ ಸಿಲುಕಿರುವುದು ಗಮನಕ್ಕೆ ಬಂದಿದೆ. ಮುಂದಿನ ವಾರ ಸಂಸತ್ ಅಧಿವೇಶನದಲ್ಲಿ ಸಂಬಂಧಪಟ್ಟ ಸಚಿವರ ಗಮನಕ್ಕೆ ತರುತ್ತೇನೆ. ಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೂ ಚರ್ಚಿಸಿ ಮೀನುಗಾರರ ಆತಂಕ ದೂರ ಮಾಡುವ ಪ್ರಯತ್ನ ನಡೆಸುತ್ತೇನೆ.

— ಬಿ.ವೈ.ರಾಘವೇಂದ್ರ ಶಿವಮೊಗ್ಗ ಲೋಕಸಭಾ ಸದಸ್ಯ