ಹೊಳೆಹೊನ್ನೂರಿನ ಬೇಕರಿಗಳಿಗೆ ಜಿಲ್ಲಾ ಆಹಾರ ಸುರಕ್ಷತಾ ಸಮಿತಿ ಅಧ್ಯಕ್ಷರು ಹಾಗೂ ಉಪ ವಿಭಾಗಾಧಿಕಾರಿ ಸತ್ಯನಾರಾಯಣ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಹೊಳೆಹೊನ್ನೂರು: ಪಟ್ಟಣದ ವಿವಿಧ ಬೇಕರಿಗಳಿಗೆ ಜಿಲ್ಲಾ ಆಹಾರ ಸುರಕ್ಷತಾ ಸಮಿತಿ ಅಧ್ಯಕ್ಷರು ಹಾಗೂ ಉಪ ವಿಭಾಗಾಧಿಕಾರಿ ಸತ್ಯನಾರಾಯಣ ಅವರು ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದರು. ಆಹಾರ ಉತ್ಪನ್ನಗಳ ತಯಾರಿಕೆ ಹಾಗೂ ಮಾರಾಟದ ಬಗ್ಗೆ ಇರುವ ನಿಯಮ ಮತ್ತು ಷರತ್ತುಗಳನ್ನು ಉಲ್ಲಂಘನೆ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆಯಲಾಗಿದೆ. ಈ ಮಾಹಿತಿ ಆಧರಿಸಿ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಸುರಕ್ಷಿತ ಕ್ರಮ ವಹಿಸದಿರುವುದು, ಅವಧಿ ಮೀರಿದ ಪಾನೀಯಗಳು, ತಯಾರಕರ ಹೆಸರು, ದಿನಾಂಕ ಇಲ್ಲದಿರುವ ತಿನಿಸುಗಳು ಪತ್ತೆಯಾಗಿವೆ. ಮಾಲೀಕರಿಗೆ ದಂಡ ವಿಧಿಸಿ, ನೋಟಿಸ್ ನೀಡಲು ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕರಿಗೆ ಸೂಚಿಸಿದರು. ಉಪ ತಹಸೀಲ್ದಾರ್ ಬಿ.ವಿಜಯ್, ಪಪಂ ಪ್ರಭಾರ ಆರೋಗ್ಯ ನಿರೀಕ್ಷಕ ಎನ್.ಅಣ್ಣಪ್ಪಸ್ವಾಮಿ, ಸಿಬ್ಬಂದಿ ಇದ್ದರು.