ಮಾರಿಜಾತ್ರೆ ಅಂಗವಾಗಿ ಸಾಗರ ನಗರಸಭೆ ರಂಗಮಂದಿರದಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದರು. ಶಿವರಾಜಕುಮಾರ್, ಗೀತಾ, ಕೆ.ಎನ್.ನಾಗೇಂದ್ರ, ಸುಂದರ ಸಿಂಗ್, ಪ್ರಧಾನ ಕಾರ್ಯದರ್ಶಿ ಗಿರಿಧರ ರಾವ್ ಇತರರಿದ್ದರು.
ಸಾಗರ: ಸಾಗರ ಜಾತ್ರೆ ಅತ್ಯಂತ ವಿಶೇಷವಾಗಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಉತ್ಸವಗಳು ಊರಿನ ಕಲಾಪರಂಪರೆ ಬಿಂಬಿಸಲು ಸಹಕಾರಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ನಗರದ ನಗರಸಭೆ ರಂಗಮಂದಿರದಲ್ಲಿ ಜಾತ್ರೆ ಅಂಗವಾಗಿ ಆಯೋಜಿಸಿರುವ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಜಾತ್ರೆ ಸಂದರ್ಭ ಸಣ್ಣಪುಟ್ಟ ದೂರುಗಳು ಇರಬಹುದು. ಜನರಿಗೆ ಅಮ್ಮನ ದರ್ಶನ ಸುಲಭವಾಗಿ ಸಿಗಬೇಕು ಎನ್ನುವ ಉದ್ದೇಶದಿಂದ ಒಂದಷ್ಟು ಕ್ರಮವನ್ನು ಪೊಲೀಸ್ ಇಲಾಖೆ ತೆಗೆದುಕೊಂಡಿದೆ. ಸಮಸ್ಯೆ ಆಗದಂತೆ ದರ್ಶನ ಪಡೆದಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜನರು ವೀಕ್ಷಿಸಬೇಕು. ನಾನು ಯಾವ ಸಮಿತಿಯಲ್ಲೂ ಹಸ್ತಕ್ಷೇಪ ಮಾಡದೆ ಉತ್ತಮವಾಗಿ ನಿರ್ವಹಿಸಿಕೊಂಡು ಹೋಗಲು ಸಲಹೆ ನೀಡಿದ್ದೇನೆ ಎಂದು ಹೇಳಿದರು.
ನಟ ಶಿವರಾಜ ಕುಮಾರ್ ಮಾತನಾಡಿ, ಸಾಗರಕ್ಕೆ ಬರುವುದು ಎಂದರೆ ಒಂದು ರೀತಿಯ ಹೆಮ್ಮೆ. ಜಾತ್ರೆ ಸಂದರ್ಭ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಥಳೀಯ ಕಲೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಸಹಕಾರಿ. ಸಾಗರದ ಮಾರಿಕಾಂಬಾ ದೇವಿ ಜಾತ್ರೆ ಹೆಸರುವಾಸಿ ಎಂದರು.
ಗೀತಾ ಶಿವರಾಜ ಕುಮಾರ್, ಹುಲಿ ಕಾರ್ತಿಕ್, ಭರತ್ ಸಾಗರ್, ಎಸಿ ವಿರೇಶ್‌ಕುಮಾರ್, ಎಎಸ್ಪಿ ಡಾ. ಬೆನಕಪ್ರಸಾದ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಸಮಿತಿ ಉಪಾಧ್ಯಕ್ಷ ಸುಂದರ ಸಿಂಗ್, ಪ್ರಧಾನ ಕಾರ್ಯದರ್ಶಿ ಗಿರಿಧರ ರಾವ್, ಸಹ ಕಾರ್ಯದರ್ಶಿ ಎಸ್.ವಿ.ಕೃಷ್ಣಮೂರ್ತಿ, ಕೋಶಾಧ್ಯಕ್ಷ ನಾಗೇಂದ್ರ ಕುಮಟಾ, ಪ್ರಮುಖರಾದ ಪುರುಷೋತ್ತಮ, ರಾಮು, ಲೋಕೇಶ್‌ಕುಮಾರ್, ಗಂಗಾಧರ, ಪುರುಷೋತ್ತಮ ಇತರರಿದ್ದರು.