ಶಿಂಡ್ಲಿ ಕಾಡಿನಲ್ಲಿ ಪತ್ತೆಯಾದ ಚಿರತೆ ಕಳೇಬರ.
ಸೊರಬ: ತಾಲೂಕಿನ ಹರೀಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿಂಡ್ಲಿ ಗ್ರಾಮದ ಅರಣ್ಯದಲ್ಲಿ ಚಿರತೆ ಮೃತಪಟ್ಟಿರುವುದು ಬುಧವಾರ ಬೆಳಕಿಗೆ ಬಂದಿದೆ. ಸೊರಬ ವಲಯದ ಸರ್ವೇ ನಂ.13ರ ನಲ್ಲೂರು ಶಾಖೆಯ ಶಿಂಡ್ಲಿ ಗ್ರಾಮದ ಕಾಡಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಗಸ್ತು ತಿರುಗುವಾಗ 2ರಿಂದ 3 ವರ್ಷದ ಚಿರತೆ ಕಳೇಬರ ಪತ್ತೆಯಾಗಿದೆ. ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್, ವಲಯ ಅರಣ್ಯಾಧಿಕಾರಿ ಶ್ರೀಪಾದ ನಾಯ್ಕ ಭೇಟಿ ನೀಡಿದ್ದಾರೆ. ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮೈಮೇಲೆ ಯವುದೇ ಗಾಯಗಳ ಗುರುತು ಪತ್ತೆಯಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಚಿರತೆ ದೇಹದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲು ನಿರ್ಧರಿಸಲಾಗಿದ್ದು, ವರದಿ ಬಂದ ನಂತರ ಸಾವಿಗೆ ಕಾರಣ ಏನೆಂಬುದು ಗೊತ್ತಾಗಲಿದೆ.