ಸೊರಬ ತಾಲೂಕಿನ ಕೋಣನಮನೆ ಹಳ್ಳ ಉಕ್ಕಿಹರಿದಿದ್ದರಿಂದ ಹುಲ್ತಿಕೊಪ್ಪ ಗ್ರಾಮದಲ್ಲಿ ಜಲಾವೃತವಾಗಿರುವ ಕೃಷಿ ಭೂಮಿ.
ಸೊರಬ: ತಾಲೂಕಿನಲ್ಲಿ ಮಳೆ ಅಬ್ಬರ ತಗ್ಗಿದ್ದರೂ ನದಿಯ ಪಾತ್ರದ ಕೆಲವು ಹಳ್ಳಗಳು ಉಕ್ಕಿ ಜಮೀನುಗಳು ಜಲಾವೃತವಾಗಿವೆ.
ಬುಧವಾರ ತಾಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ದಂಡಾವತಿ ಮತ್ತು ವರದಾ ನದಿಯಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದೆ. ಮಂಗಳವಾರ ಮಳೆ ಹೆಚ್ಚಾಗಿದ್ದರಿಂದ ಸಾಗರ ಕಡೆಯಿಂದ ಪ್ರವಾಹದ ನೀರು ಹರಿದುಬಂದಿದೆ. ಅಲ್ಲದೆ ಮಾವಿನಹೊಳೆ ನೀರು ಹೆಚ್ಚಾಗಿದ್ದರಿಂದ ತಾಲೂಕಿನ ಕೋಣನಮನೆ ಹಳ್ಳ ಉಕ್ಕಿ ಹರಿದು ಹುಲ್ತಿಕೊಪ್ಪ ಮತ್ತು ಹೆಚ್ಚೆ ಗ್ರಾಮಗಳ ಜಮೀನುಗಳು ಜಲಾವೃತವಾಗಿವೆ. ಪಕ್ಕದ ಹೆಚ್ಚೆ ಕೆರೆ ಕೋಡಿ ಬಿದ್ದಿದೆ. ಈ ಭಾಗದಲ್ಲಿ ಕಳೆದ ಎರಡು ದಿನಗಳಿಂದ ವಿದ್ಯುತ್ ಸಮಸ್ಯೆ ಎದುರಾಗಿದೆ. ಮಳೆಯ ಕಾರಣಕ್ಕೆ ಬುಧವಾರ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆದರೆ ಮಳೆ ಕಡಿಮೆಯಾಗಿ, ಗಾಳಿ ರಭಸವಾಗಿ ಬೀಸುತ್ತಿದೆ.