ಕಾಪರ್ ವೈಯರ್‌ಗಳನ್ನು ಕಳವು ಮಾಡಿರುವುದು.
ಹೊಳೆಹೊನ್ನೂರು: ಮಳೆ ಇಲ್ಲದೆ ಕಂಗಾಲಾಗಿರುವ ರೈತರು ಬೆಳೆ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಆದರೆ ತೋಟಗಳಿಗೆ ನೀರು ಹರಿಸಲು ನದಿಗಳಿಗೆ ಅಳವಡಿಸಿರುವ ಮೋಟಾರ್ ಪಂಪ್‌ಸೆಟ್‌ಗಳ ತಾಮ್ರದ ತಂತಿಯಿರುವ ವಿದ್ಯುತ್ ಕೇಬಲ್ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಕೇಬಲ್‌ಗಳನ್ನು ಕಳವು ಮಾಡುತ್ತಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ.
ಹೊಳೆಹೊನ್ನೂರು, ಹೊಳಲೂರು, ಹಂಚಿನಸಿದ್ದಾಪುರ, ಇಟ್ಟಿಗೆಹಳ್ಳಿ ಭಾಗದಲ್ಲಿ ಬಹುತೇಕ ರೈತರು ಪರವಾನಗಿ ಪಡೆದು ತುಂಗಭದ್ರಾ ನದಿ, ಭದ್ರಾ ನಾಲೆಯಿಂದ ಪೈಪ್‌ಲೈನ್ ಮಾಡಿಕೊಂಡು ಜಮೀನುಗಳಿಗೆ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪಂಪ್ ಸೆಟ್‌ಗಳಿಗೆ ಅಳವಡಿಸಿರುವ ವಿದ್ಯುತ್ ಕೇಬಲ್‌ಗಳನ್ನು ಕಳವು ಮಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಇದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗುವ ಜತೆಗೆ ಬೆಳೆಗಳಿಗೆ ನೀರು ಹರಿಸಲು ಸಮಸ್ಯೆಯಾಗಿದೆ.
ಕೂಡ್ಲಿ ಗ್ರಾಪಂ ವ್ಯಾಪ್ತಿಯ ಭದ್ರಾಪುರ, ಜಾವಳ್ಳಿ, ಕೂಡ್ಲಿ ಸುತ್ತಮುತ್ತ ರೈತರು ತುಂಗಾ ನದಿ ದಂಡೆಯಲ್ಲಿ ಪಂಪ್ ಸೆಟ್ ಅಳವಡಿಸಿದ್ದಾರೆ. 40ಕ್ಕೂ ಹೆಚ್ಚು ಮೋಟಾರ್ ಮನೆಗಳ ಬೀಗ ಮುರಿದು ಕಾಪರ್ ಕೇಬಲ್‌ಗಳನ್ನೂ ಕಳವು ಮಾಡಿದ್ದಾರೆ. ಹಳ್ಳಿಗಳಲ್ಲಿ ಪ್ರತಿದಿನ ಒಂದಲ್ಲ ಒಂದು ಜಮೀನಿನಲ್ಲಿ ಕೇಬಲ್ ಕಳ್ಳತನ ಮಾಡಲಾಗುತ್ತಿದೆ. ಒಂದೇ ರಾತ್ರಿಯಲ್ಲಿ 3 ಲಕ್ಷ ರೂ. ಮೌಲ್ಯದ 40ಕ್ಕೂ ಹೆಚ್ಚು ಮೋಟಾರ್‌ಗಳ ಕೇಬಲ್ ಕಳವು ಮಾಡಲಾಗಿದೆ.
ತಾಮ್ರಕ್ಕೆ ಉತ್ತಮ ದರ: ನದಿ ದಂಡೆ ಮೇಲಿರುವ ಮೋಟಾರ್‌ಗಳನ್ನು ಮುಟ್ಟದ ಕಳ್ಳರು ಕೇವಲ ಕೇಬಲ್‌ಗಳನ್ನು ಮಾತ್ರ ಕಳವು ಮಾಡುತ್ತಿದ್ದಾರೆ. ಬಾಕ್ಸ್‌ಗಳನ್ನು ಅಲ್ಲಿಯೇ ಕಾಪರ್ ಕೇಬಲ್‌ಗಳನ್ನು ಮಾತ್ರ ತೆಗೆದುಕೊಂಡು ಹೋಗುತ್ತಿದ್ದಾರೆ. ಏಕೆಂದರೆ ಮಾರುಕಟ್ಟೆಯಲ್ಲಿ ತಾಮ್ರಕ್ಕೆ ಉತ್ತಮ ದರ ಇರುವುದೇ ಇದಕ್ಕೆ ಕಾರಣ. ದಾವಣಗೆರೆ ಜಿಲ್ಲೆಯ ಹೊನ್ನಾಳಿ, ನ್ಯಾಮತಿ, ಚನ್ನಗಿರಿ ಭಾಗದಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದ ಕೇಬಲ್ ಕಳವು ಪ್ರಕರಣಗಳು ಶಿವಮೊಗ್ಗಕ್ಕೂ ವ್ಯಾಪಿಸಿದೆ. ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಭಾಗದಲ್ಲಿ ಖದೀಮರು ಕೈಚಳಕ ತೋರುತ್ತಿದ್ದಾರೆ. ಕಳೆದ ತಿಂಗಳು ಜಲಜೀವನ್ ಮಿಷನ್ ಕಾಮಗಾರಿ ಪೈಪ್‌ಗಳು ಕಳವಾಗಿದ್ದವು. ಆರೋಪಿಗಳನ್ನು ಪತ್ತೆಹಚ್ಚಿ ಪೈಪ್‌ಗಳನ್ನು ಜಪ್ತಿ ಮಾಡಲಾಗಿದೆ.
"
ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕಳ್ಳತನ ಮಾಡಿರುವ ತಂಡವೇ ಹೊಳೆಹೊನ್ನೂರು ಭಾಗದಲ್ಲಿ ಕಳವು ಮಾಡಿರುವ ಶಂಕೆಯಿದೆ. ಭದ್ರಾಪುರ ಹಾಗೂ ಬೊಮ್ಮನಕಟ್ಟೆ ಭಾಗದಲ್ಲಿ ಮೋಟಾರ್ ಕಾಪರ್ ಕೇಬಲ್ ಕಳವು ಮಾಡಲಾಗಿದೆ. ಪತ್ತೆಗೆ ತಂಡ ರಚಿಸಲಾಗಿದೆ. ಶೀಘ್ರಚೇ ಆರೋಪಿಗಳ ಪತ್ತೆ ಮಾಡಲಾಗುವುದು.
— ಶಿವಪ್ರಸಾದ್ ಹೊಳೆಹೊನ್ನೂರು ಠಾಣೆ ಪಿಐ