ಜಿಲ್ಲಾಧಿಕಾರಿ ಕಚೇರಿಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ವಿತರಣೆಯಲ್ಲಿನ ವ್ಯತ್ಯಯ ಕುರಿತು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅಧಿಕಾರಿಗಳ ಸಭೆ ನಡೆಸಿದರು. ಕೆ.ಬಿ.ಅಶೋಕನಾಯ್ಕ್, ಕೆ.ಎಸ್.ಗುರುಮೂರ್ತಿ, ಎನ್.ಕೆ.ಜಗದೀಶ್, ಟಿ.ಡಿ.ಮೇಘರಾಜ್, ಗುರುದತ್ತ ಹೆಗಡೆ, ಎನ್.ಹೇಮಂತ್, ಡಾ. ಎ.ಬಿ.ಸಂಜಯ್ ಇದ್ದರು.
- ಮಳೆ ಮಾಪನ ಕೇಂದ್ರಗಳು ಹಾಳಾದರೆ ವಿಮಾ ಕಂಪನಿಗಳಿಗೆ ಆದಾಯ
- ಗ್ರಾಪಂವಾರು ಜಿಲ್ಲೆಯ ಸಮಗ್ರ ವರದಿ ತರಿಸಲು ಜಿಲ್ಲಾಧಿಕಾರಿಗೆ ಸೂಚನೆ
- ಬೆಳೆ ವಿಮೆ ವಿತರಣೆ ಕುರಿತು ಅಧಿಕಾರಿಗಳ ಸಭೆ ನಡೆಸಿದ ಬಿ.ವೈ.ರಾಘವೇಂದ್ರ
ಶಿವಮೊಗ್ಗ: ಮಳೆ ಮಾಪನ ಕೇಂದ್ರಗಳು ಹಾಳಾದರೆ ವಿಮಾ ಕಂಪನಿ(Insurance company)ಗಳಿಗೆ ಆದಾಯ ಎಂಬ ಲೆಕ್ಕಾಚಾರವಿದ್ದು, ಅಧಿಕಾರಿಗಳ ಲೋಪದಿಂದ ರೈತರಿಗೆ ಅನ್ಯಾಯವಾಗಿದೆ. ಹಾಗಾಗಿ ವಾರದೊಳಗೆ ಗ್ರಾಮ ಪಂಚಾಯತ್(grapam)ವಾರು ಜಿಲ್ಲೆಯ ಸಮಗ್ರ ವರದಿ ತರಿಸಿಕೊಂಡು ರೈತರಿಗೆ ನ್ಯಾಯ ಕೊಡಿಸುವಂತೆ ಎಂದು ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ 2024ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ(Crop insurance) ವಿತರಣೆ ಕುರಿತು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರೈತರ ವಂತಿಕೆ 26 ಕೋಟಿ ರೂ., ಕೇಂದ್ರ ಮತ್ತು ರಾಜ್ಯ ಸರ್ಕಾರ(state govt)ಗಳ ವಂತಿಗೆ ಸೇರಿ 126 ಕೋಟಿ ರೂ. ಆಸುಪಾಸು ವಿಮಾ ಕಂಪನಿಗೆ ಜಮೆ ಆಗಿದೆ. ಆದರೆ ವಿಮಾ ಕಂಪನಿ 113 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ 280 ಮಳೆ ಮಾಪನ ಕೇಂದ್ರ(Rain gauge station)ಗಳಿದ್ದು, ಶೇ.70ರಿಂದ 80ರಷ್ಟು ಕೇಂದ್ರಗಳು ದುರಸ್ತಿಯಲ್ಲಿವೆ. ಮೂರ್ನಾಲ್ಕು ವರ್ಷಗಳಿಂದ ಬಹಳಷ್ಟು ಕೇಂದ್ರಗಳು ಕೆಲಸ ಮಾಡುತ್ತಿಲ್ಲ ಎಂಬುದು ಅಧಿಕಾರಿಗಳು ಗೊತ್ತಿದೆ. ಆದರೂ ಅವುಗಳನ್ನು ಸರಿಪಡಿಸಲು ಕ್ರಮ ಕೈಗೊಂಡಿಲ್ಲ. ಮೂರು ವರ್ಷಕ್ಕೊಮ್ಮೆ ಟರ್ಮ್‌ಶೀಟ್(Termsheet)ಗೆ ವರದಿಯನ್ನು ಅಧಿಕಾರಿಗಳೇ ನೀಡಿದ್ದಾರೆ. ಹಾಗಾಗಿ ಮೇಲ್ನೋಟಕ್ಕೆ ಅಧಿಕಾರಿಗಳಿಂದಲೇ ಸಾಕಷ್ಟು ಲೋಪ ಆಗಿರುವುದು ಕಂಡುಬರುತ್ತಿದೆ. ಹಾಗಾಗಿ ಆ ಲೋಪವನ್ನು ಸರಿಪಡಿಸಿ ರೈತರಿಗೆ ವಿಮೆ ಮೊತ್ತ ಮರು ಜಮೆ ಮಾಡುವಂತೆ ಸೂಚಿಸಿದರು.
ಕಳೆದೊಂದು ತಿಂಗಳಿಂದ ರೈತರು 2024ನೇ ಸಾಲಿನ ಬೆಳೆ ವಿಮೆ ಪರಿಹಾರವನ್ನು ಕಾಯುತ್ತಿದ್ದರು. ಕಳೆದೊಂದು ವಾರದಿಂದ ವಿಮೆ ಜಮೆ ಆಗುತ್ತಿದ್ದು, ಒಂದು ಗ್ರಾಪಂಗೂ ಮತ್ತೊಂದು ಗ್ರಾಪಂಗೂ ವ್ಯತ್ಯಾಸವಿದೆ. ಮಳೆ ಮಾಪನ ಕೇಂದ್ರಗಳು ಹಾಳಾಗಿದ್ದರೆ ಪಕ್ಕದ ಕೇಂದ್ರದ ಮಾಹಿತಿ ಆಧಾರದ ಮೇಲೆ ರೈತರಿಗೆ ಪರಿಹಾರ ವಿತರಣೆ ಆಗಬೇಕಿದೆ. ಆದರೆ ಇಲ್ಲಿಯೂ ಸಾಕಷ್ಟು ನ್ಯೂನ್ಯತೆಗಳು ಆಗಿವೆ. ಈ ಎಲ್ಲ ನ್ಯೂನ್ಯತೆಗಳನ್ನು ಸರಿಪಡಿಸುವಂತೆ ಸೂಚಿಸಿದರು.
ಮಾಜಿ ಶಾಸಕ ಕೆ.ಬಿ.ಅಶೋಕನಾಯ್ಕ್, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಮಾಜಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಧಾನ ಕಾರ್ಯದರ್ಶಿ ಶಿವರಾಜ್, ಮಲ್ಲಿಕಾರ್ಜುನ ಹಕ್ರೆ, ಜಿಪಂ ಸಿಇಒ ಎನ್.ಹೇಮಂತ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ. ಎ.ಬಿ.ಸಂಜಯ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಎಂ.ಕಿರಣ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.