ಆದೇಶ ಪ್ರತಿಯೊಂದಿಗೆ ಡಿಸಿ ಕಾರು ಜಪ್ತಿಗೆ ಮುಂದಾದ ರೈತ 
ಶಿವಮೊಗ್ಗ

ಆದೇಶ ಪ್ರತಿಯೊಂದಿಗೆ ಡಿಸಿ ಕಾರು ಜಪ್ತಿಗೆ ಮುಂದಾದ ರೈತ|dc car

ಪ್ರಮುಖ ಮುಖ್ಯಾಂಶಗಳು

  • ಆಶ್ರಯ ಬಡಾವಣೆಗೆ ಜಮೀನು ವಶಪಡಿಸಿಕೊಂಡಿದ್ದ ಜಿಲ್ಲಾಡಳಿತ
  • ಪರಿಹಾರ ಹಣ ನೀಡದ ಕಾರಣ ನ್ಯಾಯಾಲಯ ಸೂಚನೆ
  • 20 ವರ್ಷದಿಂದ ಕಚೇರಿ ಅಲೆಯುತ್ತಿರುವ ಸಂತ್ರಸ್ತ
ಶಿವಮೊಗ್ಗ: ಆಶ್ರಯ ಬಡಾವಣೆಗೆ 20 ವರ್ಷದ ಹಿಂದೆ ನಂದ್ಯಪ್ಪ ಎಂಬ ರೈತರೊಬ್ಬರ ಜಮೀನು(land) ವಶಪಡಿಸಿಕೊಂಡು ಪರಿಹಾರ ನೀಡದ ಕಾರಣ ಜಿಲ್ಲಾಧಿಕಾರಿ ಕಚೇರಿ(office) ಚರಾಸ್ತಿ ಜಪ್ತಿಗೆ ಎರಡನೇ ಜೆಎಂಎಫ್‌ಸಿ ಹಿರಿಯ ನ್ಯಾಯಾಧೀಶರು ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ರೈತ ಕೋರ್ಟ್ ಅಮೀನರ ಜತೆ ನ್ಯಾಯಾಲಯದ ಆದೇಶ (order) ಪ್ರತಿಯೊಂದಿಗೆ ಶುಕ್ರವಾರ ಡಿಸಿ ಕಚೇರಿ ಎದುರು ಜಪ್ತಿಗಾಗಿ ಆಗಮಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದ ವೇಳೆ ಡಿಸಿ ಕಚೇರಿ ಎದುರು ಅಮೀನರೊಂದಿಗೆ ರೈತ ಹಾಜರಾಗಿದ್ದು ಕೆಲವೇ ಕ್ಷಣಗಳಲ್ಲಿ ದೊಡ್ಡ ಸುದ್ದಿಯಾಯಿತು.
ಹರಮಘಟ್ಟದ ಸರ್ವೇ ನಂ.101ರಲ್ಲಿ ಅದೇ ಗ್ರಾಮದ ನಂದ್ಯಪ್ಪ ಎಂಬುವರ ಒಂದು ಎಕರೆ ಜಮೀನನ್ನು ಆಶ್ರಯ ಬಡಾವಣೆ ನಿರ್ಮಾಣಕ್ಕೆ ಕೆಲ ವರ್ಷದ ಹಿಂದೆ ಸರ್ಕಾರ ವಶಪಡಿಸಿಕೊಂಡಿತ್ತು. ಅವರಿಗೆ 9 ಲಕ್ಷ ರೂ. ಪರಿಹಾರ ನೀಡಲಾಗಿತ್ತು. ಪರಿಹಾರ ಮೊತ್ತ ಕಡಿಮೆಯಾಯಿತು ಎಂದು ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ 22.60 ಲಕ್ಷ ರೂ. ಪರಿಹಾರ ನೀಡುವಂತೆ ವಿಶೇಷ ಭೂಸ್ವಾಧೀನಾಧಿಕಾರಿಗೆ ಆದೇಶಿಸಿತ್ತು.
20 ವರ್ಷದಿಂದ ಈಚೆಗೆ ನಂದ್ಯಪ್ಪ ಅವರು ಹಲವು ಸಿಎಂ, ಸಚಿವರು, ಶಾಸಕರು, ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಆದರೂ ಪ್ರಯೋಜನವಾಗಿರಲಿಲ್ಲ. ನಂತರ ಅವರು ಕೋರ್ಟ್ ಮೆಟ್ಟಿಲೇರಿದ್ದರು. ನಂದ್ಯಪ್ಪ ಅವರ ಅರ್ಜಿ ಬಗ್ಗೆ ಎರಡನೇ ಸಿವಿಲ್ ನ್ಯಾಯಾಲಯ ವಾದ-ಪ್ರತಿವಾದ ಆಲಿಸಿ ಬಡ್ಡಿ ಸಹಿತ ಒಟ್ಟು 95.88 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡುವಂತೆ ಆದೇಶಿಸಿತ್ತು.
ಇಷ್ಟೆಲ್ಲ ಆದ ಬಳಿಕವೂ ನಂದ್ಯಪ್ಪ ಅವರದ್ದು ತಬರನ ಕತೆಯಾಯಿತು. ಕಚೇರಿಯಿಂದ ಕಚೇರಿಗೆ ಅಲೆದಾಡುವುದು ತಪ್ಪಲಿಲ್ಲ. ನ್ಯಾಯಾಂಗ ಹೋರಾಟಕ್ಕಾಗಿ ಮತ್ತೊಂದು ಎಕರೆ ಭೂಮಿ ಮಾರಿದರೂ ಪ್ರಯೋಜನವಾಗಲಿಲ್ಲ. ಇನ್ನೊಮ್ಮೆ ಕೋರ್ಟ್ ಮೊರೆ ಹೋದರು. ಆ ಸಂದರ್ಭದಲ್ಲಿ ನ್ಯಾಯಾಲಯ ಜಿಲ್ಲಾಧಿಕಾರಿ ಕಾರನ್ನು ಜಪ್ತಿ ಮಾಡಲು ವಾರೆಂಟ್ ಹೊರಡಿಸಿತ್ತು.
ಪರಿಹಾರ ವಿತರಣೆಗೆ ಗಡುವು ವಿಸ್ತರಿಸುವಂತೆ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಪತ್ರ ಬರೆಯುವುದರೊಂದಿಗೆ ಶುಕ್ರವಾರ ಅವರ ಸರ್ಕಾರಿ ಕಾರು ಜಪ್ತಿಯಾಗುವುದು ತಪ್ಪಿದೆ.
"

ನನಗೆ ವಯಸ್ಸಾಗಿದ್ದು, ಕಾಯಿಲೆಯಿಂದ ಬಳಲುತ್ತಿದ್ದೇನೆ. ಬೆಂಗಳೂರು, ಶಿವಮೊಗ್ಗ ನ್ಯಾಯಾಲಯಕ್ಕೆಂದು ಓಡಾಡಿ ಬಸವಳಿದಿದ್ದೇನೆ. ಹಲವು ಅಧಿಕಾರಿಗಳ ಕಚೇರಿಗೆ ಅಲೆದಾಡಿದರೂ ಪರಿಹಾರ ಸಿಕ್ಕಿಲ್ಲ. ಯಾವ ಅಧಿಕಾರಿಯೂ ಕರುಣೆ ತೋರುತ್ತಿಲ್ಲ. ಕಾನೂನು ಹೋರಾಟದ ಹಣಕಾಸು ಖರ್ಚಿಗಾಗಿ ಒಂದು ಎಕರೆ ಜಮೀನು ಮಾರಾಟ ಮಾಡಿದ್ದೇನೆ.