ಆನ್ಲೈನ್ ವಂಚನೆ  
ಶಿವಮೊಗ್ಗ

ಹಣ ಹೂಡಿಕೆ ಮಾಡಿ 2 ಕೋಟಿ ಕಳೆದುಕೊಂಡ ರೈತ | Fake Demat Account

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ಜಾಲತಾಣದಲ್ಲಿ ಲಾಭಾಂಶದ ಆಮಿಷ
  • ಶಿವಮೊಗ್ಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ
  • ಡಿ-ಮ್ಯಾಟ್ ಖಾತೆ ಸೃಷ್ಟಿಸಿ ಯುವ ರೈತನಿಗೆ ಮೋಸ
ಶಿವಮೊಗ್ಗ: ಸಾಮಾಜಿಕ ಜಾಲತಾಣಗಳ ಮೂಲಕ ಹಣ ಹೂಡಿಕೆ(Investment) ಮಾಡಿ ಹೆಚ್ಚಿನ ಲಾಭಾಂಶ ಗಳಿಸಬಹುದು ಎಂದು ನಂಬಿದ ಭದ್ರಾವತಿ ತಾಲೂಕಿನ ಯುವ ರೈತನೊಬ್ಬ ಹಂತ ಹಂತವಾಗಿ 2.05 ಕೋಟಿ ರೂ. ಕಳೆದುಕೊಂಡಿದ್ದಾರೆ.
32 ವರ್ಷದ ರೈತ ಕೋಟ್ಯಂತರ ರೂ. ಕಳೆದುಕೊಂಡವ. 2023ರ ಜನವರಿ ತಿಂಗಳಿನಲ್ಲಿ ಇನ್‌ಸ್ಟಾಗ್ರಾಂ ಖಾತೆ(Instagram account)ನೋಡುತ್ತಿದ್ದಾಗ ಖಾಸಗಿ ಕಂಪನಿ ಲೋಗೋ ಬಳಸಿ ಮಾಡಿದ್ದ ಟ್ರೇಡಿಂಗ್ ಜಾಹೀರಾತು(Trading Advertisement) ಕಾಣಿಸಿಕೊಂಡಿತ್ತು. ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಕೆಲ ದಿನಗಳಲ್ಲಿ ಅಧಿಕ ಲಾಭಾಂಶ ಸಿಗಲಿದೆ ಎಂದು ಬರೆಯಲಾಗಿತ್ತು. ಅದನ್ನು ನಂಬಿದ ಯುವ ರೈತ ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದರು.
ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ನಕಲಿ ವೆಬ್ ಪೇಜ್(Fake web page) ತೆರೆದುಕೊಂಡಿದ್ದು, ಅದರಲ್ಲಿ ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಖಾತೆಗಳ ಸಂಪೂರ್ಣ ಮಾಹಿತಿ ಪಡೆಯಲಾಗಿತ್ತು. ತದನಂತರ ವಂಚಕರು ರೈತನ ಹೆಸರಿನಲ್ಲಿ ನಕಲಿ ಡಿ-ಮ್ಯಾಟ್ ಖಾತೆ(Fake Demat Account) ಸೃಷ್ಟಿಸಿ ಅದರ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್‌ಅನ್ನು ವಂಚಕರೇ ಇಟ್ಟುಕೊಂಡಿದ್ದರು. ರೈತ ಪಾಸ್‌ವರ್ಡ್ ಕೇಳಿದಾಗ ನೀವು ದೊಡ್ಡ ಮೊತ್ತದ ಹಣ ಹೂಡಿಕೆ ಮಾಡುವಾಗ ನಾವೇ ಓಪನ್ ಮಾಡಿಕೊಡುತ್ತೇವೆ ಎಂದು ಸಬೂಬು ಹೇಳಿದ್ದರು.
ರೈತನನ್ನು ಗ್ರೂಪ್ ಒಂದಕ್ಕೆ ಸೇರಿಸಿ ನಕಲಿ ಗ್ರಾಹಕರನ್ನು ಸೃಷ್ಟಿಸಿ, ಅವರಿಗೆ ಲಾಭ ಬಂದಿರುವಂತೆ ಸುಳ್ಳು ಸ್ಕ್ರೀನ್‌ಶಾಟ್‌(Screenshot)ಗಳನ್ನು ತೋರಿಸಿ ನಂಬಿಸಲಾಗಿತ್ತು. ನಂತರ ಟೆಲಿಗ್ರಾಂ ಮೂಲಕವೇ ವಿವಿಧ ಬ್ಯಾಂಕ್ ಖಾತೆಗಳ ಕ್ಯೂಆರ್ ಕೋಡ್ ಮತ್ತು ಯುಪಿಐ ಲಿಂಕ್ ಕಳುಹಿಸಿ, ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದರು.
ನಂಬಿದ ರೈತ 2023ರ ಜನವರಿಯಿಂದ 2026ರ ಏಪ್ರಿಲ್ವರೆಗೆ ಹಂತ ಹಂತವಾಗಿ 2.05 ಕೋಟಿ ರೂ. ಅನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದರು. ದೂರುದಾರ ತಮಗೆ ತುರ್ತು ಹಣದ ಅವಶ್ಯಕತೆ ಇದ್ದು, ಲಾಭಾಂಶವನ್ನು ವಿತ್‌ಡ್ರಾ ಮಾಡಿಕೊಡುವಂತೆ ಕೇಳಿದಾಗ ಈಗಲೇ ವಿತ್‌ಡ್ರಾ ಮಾಡಿದರೆ ನಿಮಗೆ ಭಾರಿ ನಷ್ಟವಾಗುತ್ತದೆ. ಮತ್ತಷ್ಟು ದಿನ ಬಿಟ್ಟರೆ ಕೋಟ್ಯಂತರ ರೂ. ಲಾಭ ಸಿಗಲಿದೆ ಎಂದು ನಂಬಿಸಿದ್ದರು.
ಏಪ್ರಿಲ್ನಲ್ಲಿ ಹಣಕಾಸಿನ ತೊಂದರೆ ಎದುರಾದಾಗ ರೈತ ತಮ್ಮ ಅಸಲು ಮತ್ತು ಲಾಭ ನೀಡುವಂತೆ ಒತ್ತಾಯಿಸಿದ್ದರು. ತದನಂತರ ರೈತನ ಹೆಸರಿನಲ್ಲಿದ್ದ ಡಿ-ಮ್ಯಾಟ್ ಖಾತೆಯನ್ನೇ ಬ್ಲಾಕ್ ಮಾಡಿ ಸಂಪರ್ಕಕ್ಕೆ ಸಿಗದಂತೆ ವಂಚಕರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.