ಸೊರಬ ತಾಲೂಕಿನ ಉಳವಿ-ಸಾಗರ ಮುಖ್ಯ ರಸ್ತೆಯಲ್ಲಿ ಬೃಹತ್ ಗಾತ್ರದ ಮಾವಿನ ಮರ ಬಿದ್ದಿರುವುದು.
ಸೊರಬ: ತಾಲೂಕಿನ ಉಳವಿ-ಸಾಗರ ಮುಖ್ಯ ರಸ್ತೆಯಲ್ಲಿ ಭಾನುವಾರ ಬೃಹತ್ ಗಾತ್ರದ ಮಾವಿನ ಮರ ಬುಡಸಹಿತ ಬಿದ್ದು ಎರಡು ತಾಸಿಗೂ ಹೆಚ್ಚು ಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಗಾಳಿ, ಮಳೆಯಿಂದ ರಸ್ತೆಗೆ ಬಿದ್ದಿ ಭಾರಿ ಗಾತ್ರದ ಮಾವಿನ ಮರವನ್ನು ಗ್ರಾಮಸ್ಥರ ಸಹಕಾರದಿಂದ ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವುಗೊಳಿಸಿದರು.
ಉಳವಿ-ಸಾಗರ ಮುಖ್ಯ ರಸ್ತೆಯಲ್ಲಿ 20 ಕಿ.ಮೀ ದೂರದವರೆಗೂ ಎರಡೂ ಬದಿಯಲ್ಲಿ ಹಳೆಯ ಮಾವಿನ ಮರಗಳಿವೆ. ರಸ್ತೆಗೆ ಚಾಚಿಕೊಂಡಿರುವ ಬೃಹತ್ ಗಾತ್ರದ ಕೊಂಬೆಗಳು ಬಿದ್ದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈಗ ಮಳೆ ಜತೆಗೆ ಗಾಳಿಯೂ ಜೋರಾಗಿರುವುದರಿಂದ ಬುಡ ಸಡಿಲಗೊಂಡು ರಸ್ತೆಗೆ ಉರುಳುತ್ತಿವೆ. ಕೂಡಲೇ ರೆಂಬೆ, ಕೊಂಬೆಗಳನ್ನು ಕತ್ತರಿಸಿ ಮರಗಳು ಬೀಳದಂತೆ ಕ್ರಮ ಕೈಗೊಳ್ಳಬೇಕಿದೆ.
ತಾಲೂಕಿನಲ್ಲಿ ಶನಿವಾರ ಬೆಳಗ್ಗೆಯಿಂದ ಭಾನುವಾರ ಬೆಳಗ್ಗೆವರೆಗೆ ಉತ್ತಮ ಮಳೆಯಾಗಿದೆ. ತಾಲೂಕಿನ ನಲೂರು ಭಾಗದಲ್ಲಿ 58 ಮಿ.ಮೀ, ಉಳವಿ 47.2 ಮಿ.ಮೀ, ಕುಪ್ಪೆ 46.6 ಮಿ.ಮೀ, ಬೆನ್ನೂರು 54.6 ಮಿ.ಮೀ, ಕುಪ್ಪಗಡ್ಡೆ 40.8 ಮಿ.ಮೀ, ಚಂದ್ರಗುತ್ತಿ 56 ಮಿ.ಮೀ, ಜಡೆ 38.6 ಮಿ.ಮೀ ಮಳೆಯಾಗಿದೆ. ಹಿರೇಶಕುನ, ಉಳವಿ ಸೇರಿ ಕೆಲವು ಕೆರೆಗಳಿಗೆ ನೀರು ಬಂದಿದೆ. ಹಾಗೆಯೇ ವರದಾ ಮತ್ತು ದಂಡಾವತಿ ನದಿಗಳಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.