ಸಾಗರದ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿವಿಧ ಚಟುವಟಿಕೆಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದರು. ಡಾ. ಬೆನಕಪ್ರಸಾದ್, ಬಿ.ಎ.ಇಂದೂಧರ, ಉಮೇಶ್, ಲೋಕೇಶ್ ಇತರರಿದ್ದರು.
ಸಾಗರ: ಹದಿಹರೆಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾದಾಗ ಹೆದರಬಾರದು. ಪಾಲಕರು, ಸಮಾಜ, ಶಿಕ್ಷಣ ಸಂಸ್ಥೆಗಳು ನಿಮ್ಮ ಜತೆಗೆ ಇರುತ್ತಾರೆ. ಬದುಕನ್ನೇ ಕೊನೆಗೊಳಿಸುವಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಕಾಲೇಜಿನ ವಿವಿಧ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಇತ್ತೀಚೆಗೆ ಸಣ್ಣಪುಟ್ಟ ವಿಷಯಕ್ಕೆ ಆತ್ಮಹತ್ಯೆ ಮಾಡಿಕೊಂಡ ಕೆಲವು ಘಟನೆಗಳು ಮನಸ್ಸಿಗೆ ನೋವು ತಂದಿವೆ. ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಆತ್ಮಸ್ಥೆರ್ಯವನ್ನು ಯುವ ಸಮೂಹ ಬೆಳೆಸಿಕೊಳ್ಳಬೇಕು ಎಂದರು.
ಪಾಲಕರು ಅನೇಕ ಕನಸುಗಳನ್ನು ಹೊತ್ತು ನಿಮ್ಮನ್ನು ಕಾಲೇಜಿಗೆ ಕಳಿಸಿರುತ್ತಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೂಲಿ ಕೆಲಸ ಮಾಡುವ ಜತೆಗೆ ಸಾಲವನ್ನೂ ಸಹ ಮಾಡಿರುತ್ತಾರೆ. ಅವರ ಕನಸು ಕನಸಾಗಿಯೆ ಉಳಿಯಬಾರದು. ನಿಮ್ಮ ನಿರಂತರ ಓದು ಅವರ ಕನಸು ನನಸು ಮಾಡಲು ಸಾಧ್ಯ. ಒಂದು ಕಾಲದಲ್ಲಿ ಜೂನಿಯರ್ ಕಾಲೇಜು ಎಂದರೆ ಮೂಗು ಮುರಿಯುತ್ತಿದ್ದರು. ಇದೀಗ 2600 ವಿದ್ಯಾರ್ಥಿಗಳನ್ನು ಹೊಂದಿದ್ದು, ರಾಜ್ಯದಲ್ಲಿಯೇ ಅತಿ ದೊಡ್ಡ ಕಾಲೇಜು ಎನ್ನುವ ಹೆಗ್ಗಳಿಕೆ ಜತೆಗೆ ಉತ್ತಮ ಫಲಿತಾಂಶ ಬರುತ್ತಿರುವುದು ಸಂತೋಷ ತಂದಿದೆ ಎಂದರು.
ಪ್ರಾಚಾರ್ಯ ಜಿ.ಪರಮೇಶ್ವರಪ್ಪ ಮಾತನಾಡಿ, ಶಾಸಕರ ಮಾರ್ಗದರ್ಶನ, ಕಾಲೇಜು ಅಭಿವೃದ್ದಿ ಸಮಿತಿ ಸಹಕಾರದಿಂದ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಈ ವರ್ಷ 2600 ಮಕ್ಕಳು ಓದುತ್ತಿದ್ದು, ಕಳೆದ ವರ್ಷಕ್ಕಿಂತ 200ಕ್ಕೂ ಹೆಚ್ಚಿನ ಮಕ್ಕಳು ಪ್ರವೇಶ ಪಡೆದಿದ್ದಾರೆ. ಕಳೆದ ವರ್ಷ 170ಕ್ಕೂ ಹೆಚ್ಚು ರ‌್ಯಾಂಕ್ ಬಂದಿದ್ದವು ಎಂದು ತಿಳಿಸಿದರು.
ಡಿವೈಎಸ್ಪಿ ಡಾ. ಬೆನಕಪ್ರಸಾದ್, ಸಿಡಿಸಿ ಉಪಾಧ್ಯಕ್ಷ ಬಿ.ಎ.ಇಂದೂಧರ, ಪ್ರಮುಖರಾದ ಉಮೇಶ್, ಲೋಕೇಶ್, ಭವ್ಯಾ, ಬಸವರಾಜ್, ಸಲೀಂ ಯೂಸೂಫ್, ಶ್ರೀನಿಧಿ , ಲಕ್ಷಿ, ಬಂಗಾರಪ್ಪ, ಸತೀಶ್, ಸೀತಾರಾಮ ಪಟಗಾರ್ ಇತರರಿದ್ದರು.