ಶಿವಮೊಗ್ಗ: ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿದ್ದ ಡಾಬಾ ಹಾಗೂ ಮಾಂಸಾಹಾರಿ ಹೋಟೆಲ್ಗಳ ಮೇಲೆ ಅಬಕಾರಿ ಇಲಾಖೆಯು ಸಾಮೂಹಿಕ ದಾಳಿ ನಡೆಸಿ 7 ಪ್ರಕರಣ ದಾಖಲಿಸಿಕೊಂಡಿದೆ.
ಜಿಲ್ಲೆಯ ಅಬಕಾರಿ ಉಪ ಆಯುಕ್ತ ಡಾ. ಕೆ.ಎಸ್.ಮುರಳಿ ಅವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕರಾದ ಶಿವಮೊಗ್ಗ ಉಪ ವಿಭಾಗದ ಎಚ್.ನೌಷಾದ್ ಅಹಮ್ಮದ್ ಖಾನ್ ಹಾಗೂ ಸಾಗರ ಉಪ ವಿಭಾಗದ ಶೀಲಾ ಧಾರಜ್ಕರ್ ಅವರ ನೇತೃತ್ವದಲ್ಲಿ ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಶಿವಮೊಗ್ಗ ಮತ್ತು ತೀರ್ಥಹಳ್ಳಿ ತಾಲೂಕಿನ ಗಾಜನೂರು, ಸಕ್ರೆಬೈಲು ಹಾಗೂ ಮಂಡಗದ್ದೆ ಗ್ರಾಮಗಳ ವ್ಯಾಪ್ತಿಯ ಡಾಬಾ ಮತ್ತು ಮಾಂಸಾಹಾರಿ ಹೋಟೆಲ್ಗಳ ಮೇಲೆ ಸಾಮೂಹಿಕ ದಾಳಿ ನಡೆಸಲಾಗಿದೆ. ಈ ವೇಳೆ ಗ್ರಾಹಕರಿಗೆ ಅಕ್ರಮವಾಗಿ ಮದ್ಯಪಾನ ಮಾಡಲು ಅವಕಾಶ ನೀಡಿದ್ದ ಹೋಟೆಲ್ ಹಾಗೂ ಡಾಬಾ ಮಾಲೀಕರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ ಅಡಿಯಲ್ಲಿ 7 ಮೊಕದ್ದಮೆ ದಾಖಲಿಸಲಾಗಿದೆ.
ಇನ್ಮುಂದೆ ಯಾವುದೇ ಡಾಬಾ ಅಥವಾ ಮಾಂಸಾಹಾರಿ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಅಕ್ರಮವಾಗಿ ಮದ್ಯ ಸೇವಿಸಲು ಅವಕಾಶ ನೀಡಬಾರದೆಂದು ಅಬಕಾರಿ ಇಲಾಖೆಯು ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.