ಶಿರಾಳಕೊಪ್ಪದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವದದಲ್ಲಿ ಮುಖ್ಯಾಧಿಕಾರಿ ಪರುಶುರಾಮ್, ರಾಘವೇಂದ್ರ, ಸುಶ್ಮಿತಾ ಮತ್ತಿತರರು ಧ್ವಜವಂದನೆ ಸಲ್ಲಿಸಿದರು.
ಶಿರಾಳಕೊಪ್ಪ: ಭಾರತದ ಸಂವಿಧಾನವು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅಡಿಪಾಯ. ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನೀಡಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಪರಶುರಾಮ್ ಹೇಳಿದರು.
ಪಟ್ಟಣದ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಸೋಮವಾರ ಪುರಸಭೆಯಿಂದ ಆಯೋಜಿಸಿದ್ದ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸ್ವಾತಂತ್ರ್ಯ ಮತ್ತು ಗಣರಾಜ್ಯ ಸ್ಥಾನಮಾನಕ್ಕಾಗಿ ಅನೇಕ ಮಹನೀಯರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬಲಿಷ್ಠ ಹಾಗೂ ಸ್ವಾವಲಂಬಿ ಭಾರತ ನಿರ್ಮಾಣ ಸಾಧ್ಯ ಎಂದು ಹೇಳಿದರು.
ನಾವು ಕೇವಲ ನಮ್ಮ ಹಕ್ಕುಗಳ ಬಗ್ಗೆ ಚಿಂತಿಸದೆ, ದೇಶದ ಅಭಿವೃದ್ಧಿಗಾಗಿ ನಮ್ಮ ಕರ್ತವ್ಯಗಳನ್ನು ಶಿಸ್ತುಬದ್ಧವಾಗಿ ಪಾಲಿಸಬೇಕು. ಸ್ವಚ್ಛತೆ, ಪರಿಸರ ಸಂರಕ್ಷಣೆ, ಸಾಮಾಜಿಕ ಸೌಹಾರ್ದತೆ ಮತ್ತು ರಾಷ್ಟ್ರೀಯ ಐಕ್ಯತೆ ಇವು ದೇಶದ ಪ್ರಗತಿಗೆ ಪ್ರಮುಖ ಅಂಶಗಳಾಗಿವೆ ಎಂದು ಹೇಳಿದರು.
ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಟ್ಟಣದ ವಿವಿಧ ಶಾಲಾ ಮಕ್ಕಳು ಭಾಗವಹಿಸಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು. ಪರಿಸರ ಅಭಿಯಂತ ರಾಘವೇಂದ್ರ, ಸಮುದಾಯ ಸಂಪನ್ಮೂಲ ಅಧಿಕಾರಿ ಬಾಲಾಜಿ ರಾವ್, ಇಂಜಿನಿಯರ್‌ಗಳಾದ ಶೇಖರ್‌ನಾಯ್ಕ, ಸುಶ್ಮಿತಾ, ಗಜೇಂದ್ರ, ಪುರಸಭೆ ಮಾಜಿ ಸದಸ್ಯರಾದ ಮಕ್ಬುಲ್ ಸಾಬ್, ಸಮೀವುಲ್ಲಾ, ರವಿ ಬಂಗೇರ, ಪೊಲೀಸ್ ಹಾಗೂ ಹೋಮ್‌ಗಾರ್ಡ್ ಸಿಬ್ಬಂದಿ ಭಾಗವಹಿಸಿದ್ದರು.