ಬಾಣಂತಿ ಸುಮಾ ಅವರ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ನಗರ ನಿತಿನ್, ರಾಜೇಶ್, ಪ್ರಕಾಶ್, ಉಮೇಶ್ ಮತ್ತಿತರರು ತಾಲೂಕು ವೈದ್ಯಾಧಿಕಾರಿ ನಟರಾಜ್ ಅವರಿಗೆ ಮನವಿ ಸಲ್ಲಿಸಿದರು. 
ಶಿವಮೊಗ್ಗ

ಬಾಣಂತಿ ಸುಮಾ ಸಾವಿಗೆ ನ್ಯಾಯ ಕಲ್ಪಿಸಿ | hunger protest

ಹೊಸನಗರ: ತಾಲೂಕು ಕೇಂದ್ರದಲ್ಲಿ ಸುಸಜ್ಜಿತ ಹೆರಿಗೆ ಆಸ್ಪತ್ರೆ ನಿರ್ಮಿಸಬೇಕು. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಈಚೆಗೆ ಮೃತಪಟ್ಟ ಕೋಡೂರಿನ ಬಾಣಂತಿ ಸುಮಾ ಅವರ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ನಗರ ನಿತಿನ್ ಸರ್ಕಾರಿ ಆಸ್ಪತ್ರೆ ಎದುರು ಉಪವಾಸ ಸತ್ಯಾಗ್ರಹ ನಡೆಸಿ, ತಾಲೂಕು ವೈದ್ಯಾಧಿಕಾರಿ ನಟರಾಜ್ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಜನರಿಗೆ ಮೂಲ ಸೌಲಭ್ಯ ಸರಿಯಾಗಿ ಸಿಗುತ್ತಿಲ್ಲ. ಮುಖ್ಯವಾಗಿ ಸುಸಜ್ಜಿತ ಹೆರಿಗೆ ಆಸ್ಪತ್ರೆ ಇಲ್ಲದಿರುವುದು ದೊಡ್ಡ ಸಮಸ್ಯೆ. ತಾಲೂಕಿನ ಗರ್ಭಿಣಿಯರು ಚಿಕಿತ್ಸೆಗಾಗಿ ಸಾಗರ, ತೀರ್ಥಹಳ್ಳಿ, ಶಿವಮೊಗ್ಗದ ಆಸ್ಪತ್ರೆಗೆ ಹೋಗುವ ಸ್ಥಿತಿ ಇದೆ. ಇಲ್ಲಿಯೇ ಸುಸಜ್ಜಿತ ಆಸ್ಪತ್ರೆ ಇದ್ದಿದ್ದರೆ ಸುಮಾ ಜೀವ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣ ವಾಗುತ್ತಿರಲಿಲ್ಲ ಎಂದರು.  
ತಾಲೂಕಿನ ಶೇ.80ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಇಲ್ಲ. ಹಲವು ಹಳ್ಳಿಗಳು ನೆಟ್‌ವರ್ಕ್ ಹಾಗೂ ಸಾರಿಗೆ ಸೌಲಭ್ಯಗಳಿಂದ ವಂಚಿತವಾಗಿವೆ. ತುರ್ತು ಚಿಕಿತ್ಸೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬಂದರೆ ಅಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂದು ದೂರಿದರು.
ಶಾಸಕ ಆರಗ ಜ್ಞಾನೇಂದ್ರ ಅವರ ಸಹಾಯಕ ರಾಜೇಶ್ ಹಿರೀಮನೆ, ರ‌್ಯಾವೆ ಪ್ರಕಾಶ್, ಉಮೇಶ್ ಇತರರಿದ್ದರು.