ಸಾಗರ ತಾಲೂಕಿನ ಹೊನ್ನೇಸರ ಶ್ರಮಜೀವಿ ಆಶ್ರಮದಲ್ಲಿ ಆಯೋಜಿಸಿದ್ದ ಆಹಾರ, ಆರೋಗ್ಯ, ಆದಾಯ ಕಾರ್ಯಾಗಾರದಲ್ಲಿ ಪಾಲ್ಗೊಂಡವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಅನಿಲ್ ಹೆಗ್ಡೆ , ರಾಮ್‌ಬಾಬು, ಪುರುಷೋತ್ತಮ ಅಡವೆ, ಜಯರಾಮ ಪಾಟೀಲ್ ಇದ್ದರು.
ಸಾಗರ: ಗ್ರಾಮೀಣ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹಿಸಬೇಕು. ಇದರಿಂದ ಕುಶಲಕರ್ಮಿಗಳ ಸಬಲೀಕರಣ ಸಾಧ್ಯ ಎಂದು ಸಾಮಾಜಿಕ ಹೋರಾಟಗಾರ ಅನಿಲ್ ಹೆಗ್ಡೆ ಹೇಳಿದರು.
ಹೊನ್ನೇಸರ ಶ್ರಮಜೀವಿ ಆಶ್ರಮದಲ್ಲಿ ಗಾಂಧಿ ಪ್ರವಾಸೋದ್ಯಮ ಯೋಜನೆಯಡಿ ಆಯೋಜಿಸಿದ್ದ ಮೂರು ದಿನದ ಆಹಾರ, ಆರೋಗ್ಯ, ಆದಾಯ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದರು.
ಚರಕ ಸಂಸ್ಥೆ ಪರಿಸರಸ್ನೇಹಿ ಉತ್ಪಾದನೆ, ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುವುದು, ಗ್ರಾಮೀಣ ಕೈಗಾರಿಕೆಗಳನ್ನು ಬೆಳೆಸುವುದು ಹಾಗೂ ಸಮಾಜದ ದುರ್ಬಲ ವರ್ಗಗಳ ಆರ್ಥಿಕ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ನೇಕಾರರು, ಚರ್ಮದ ಕೆಲಸಗಾರರು ಸೇರಿ ಗ್ರಾಮೀಣ ಕುಶಲಕರ್ಮಿಗಳಲ್ಲಿ ಹೆಚ್ಚಿನವರು ಹಿಂದುಳಿದ ವರ್ಗದವರು. ಅವರು ತಯಾರಿಸುವ ಬಟ್ಟೆ, ಚಪ್ಪಲಿ ಹಾಗೂ ಇತರ ಕೈಗಾರಿಕಾ ಉತ್ಪನ್ನಗಳನ್ನು ಜನರು ಖರೀದಿಸಬೇಕು ಎಂದರು.
ಸಬಲೀಕರಣ ಎನ್ನುವುದು ಭಾಷಣ, ಘೋಷಣೆಗಳಿಗೆ ಸೀಮಿತವಾಗಬಾರದು. ಗ್ರಾಮೀಣ ಕೈಗಾರಿಕೆಗಳ ಉತ್ಪನ್ನಗಳಿಗೆ ಬೆಂಬಲ ನೀಡುವ ಮೂಲಕ ಉದ್ಯೋಗ ಸೃಷ್ಟಿ, ಪರಿಸರ ಸಂರಕ್ಷಣೆಗೆ ಸಹಕರಿಸಬೇಕು. ಇದೇ ಗಾಂಧೀಜಿ ಅವರ ಸ್ವದೇಶಿ, ಗ್ರಾಮೋದ್ಯೋಗದ ಪರಿಕಲ್ಪನೆಯ ನೈಜ ಅನುಷ್ಠಾನವಾಗಿದೆ ಎಂದರು.
ಚರಕ ಸಂಸ್ಥೆ ಸಂಸ್ಥಾಪಕ ಪ್ರಸನ್ನ ಮಾತನಾಡಿ, ಗ್ರಾಮಗಳು ಮಾರುಕಟ್ಟೆ ಅವಲಂಬಿತ ಜೀವನಶೈಲಿಯಿಂದ ಆರ್ಥಿಕವಾಗಿ ದುರ್ಬಲಗೊಳ್ಳುತ್ತಿದೆ. ಹಿಂದೆ ಹಳ್ಳಿಗಳಲ್ಲಿ ದೊರೆಯುತ್ತಿದ್ದ ಅನೇಕ ಅಗತ್ಯ ವಸ್ತುಗಳಿಗೆ ಹಣ ಖರ್ಚು ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮಗಳು ಸ್ವಾವಲಂಬಿಯಾಗುವುದು ಅತ್ಯಂತ ಅವಶ್ಯಕ ಎಂದು ತಿಳಿಸಿದರು.
ರಾಮ್‌ಬಾಬು, ಪುರುಷೋತ್ತಮ ಅಡವೆ, ಜಯರಾಮ ಪಾಟೀಲ್, ರಜನಿ, ಎಂ.ವಿ.ಪ್ರತಿಭಾ, ಎನ್.ರಮೇಶ್, ಟೆರೆನ್ಸ್ ಪೀಟರ್, ನಾಗರತ್ನಾ, ಜೆ.ಕೃಷ್ಣ, ಪದ್ಮಶ್ರೀ ಹಾಜರಿದ್ದರು.