ಶಿವಮೊಗ್ಗ: ಶಿವಮೊಗ್ಗ ದಸರಾ ಅಂಬಾರಿ ಮೆರವಣಿಗೆ ರದ್ದಾದ ಬೆನ್ನಲ್ಲೇ ಆತಂಕ ಸೃಷ್ಟಿಸಿದ್ದ ಸೋಮಣ್ಣ ಸೇರಿ ಮೂರು ಆನೆಗಳನ್ನೂ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ರಾತ್ರೋರಾತ್ರಿ ಪ್ರತ್ಯೇಕವಾಗಿಯೇ ಸಕ್ರೆಬೈಲ್ ಬಿಡಾರಕ್ಕೆ ಸಾಗಿಸಿದರು. ಮೆರವಣಿಗೆ ರದ್ದಾದರೂ ಅದೃಷ್ಟವಶಾತ್ ಸಣ್ಣಪುಟ್ಟ ಅನಾಹುತ ಹೊರತುಪಡಿಸಿ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ ಎಂಬ ನಿರಾಳತೆ ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲಿ ಕಂಡುಬಂದಿತು.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಗುರುವಾರ ಬೆಳಗ್ಗೆ ಅಂಬಾರಿ ಹೊತ್ತಿದ್ದ ಸೋಮಣ್ಣ ಸೇರಿ ಗಜಪಡೆಗೆ ಮಹಾನಗರ ಪಾಲಿಕೆಯಿಂದ ಭವ್ಯ ಬೀಳ್ಕೊಡುಗೆ ನೀಡಬೇಕಿತ್ತು. ಆದರೆ ಸೋಮಣ್ಣನ ಅಚಾತುರ್ಯದಿಂದ ಭಯದ ವಾತಾವರಣ ಸೃಷ್ಟಿಯಾಗಿದ್ದ ಕಾರಣ ಅರಣ್ಯ ಇಲಾಖೆ ರಾತ್ರಿಯೇ ಸೋಮಣ್ಣ, ಸಾಗರ್ ಮತ್ತು ಬಹದ್ದೂರ್ ಆನೆಗಳನ್ನು ಮೂರು ಲಾರಿಗಳಲ್ಲಿ ಕರೆದೊಯ್ದರು.
ಅಂಬಾರಿ ಸಹಿತ ಓಡಿದ್ದ ಸೋಮಣ್ಣ ಆನೆ ಕೆಲವು ಹೊತ್ತು ಎಲ್ಲರನ್ನು ದಿಗಿಲುಗೊಳಿಸಿತ್ತು. ಆನಂತರ ಆನೆಯನ್ನು ನಿಯಂತ್ರಣಕ್ಕೆ ತರಲಾಗಿತ್ತು. ಜಿಲ್ಲಾ ತರಬೇತಿ ಸಂಸ್ಥೆ ಆವರಣಕ್ಕೆ ಆನೆಗಳನ್ನು ಕರೆದೊಯ್ದು ವಿಶ್ರಾಂತಿ ನೀಡಲಾಗಿತ್ತು. ಬಳಿಕ ವಾಸವಿ ಶಾಲೆ ಎದುರು ಖಾಲಿ ಜಾಗಕ್ಕೆ ಕರೆತಂದು ಅಲ್ಲಿ ನಿರ್ಮಿಸಿದ್ದ ರಾಂಪ್ ಮೂಲಕ ಲಾರಿಗಳಿಗೆ ಹತ್ತಿಸಲಾಯಿತು.
ಅರವಳಿಕೆ ನೀಡದಿದ್ದರಿಂದ ಸೋಮಣ್ಣನಿಗೆ ಕೆಲಕಾಲ ವಿಶ್ರಾಂತಿ ನೀಡಲಾಗಿತ್ತಾದರೂ ರಾತ್ರಿ 10.30ಕ್ಕೆ ಆನೆಗಳನ್ನ ಶಿಫ್ಟ್ ಮಾಡುವ ಕಾರ್ಯಾಚರಣೆ ಆರಂಭಗೊಂಡಿತು. ಮೂರು ಆನೆಗಳನ್ನು ಡಯಟ್ ಕೇಂದ್ರದಿಂದ ವಾಸವಿ ಸ್ಕೂಲ್ಗೆ ಕರೆತಂದು ಅಲ್ಲಿ ನಿರ್ಮಿಸಿದ್ದ ಏರಿ ಮೂಲಕ ಆನೆಗಳನ್ನ ಲಾರಿಗೆ ಹತ್ತಿಸಲಾಗಿದೆ. ಬಳಿಕ ಸಕ್ರೆಬೈಲು ಆನೆ ಬಿಡಾರಕ್ಕೆ ಕರೆದೊಯ್ಯಲಾಯಿತು. ರಾತ್ರಿಯಾದರೂ ಆನೆಗಳನ್ನು ನೋಡಲು ಕೋಟೆ ರಸ್ತೆಯಲ್ಲಿ ನೂರಾರು ಮಂದಿ ಜಮಾಯಿಸಿದ್ದರು.
ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಆನೆಗೆ ಅರಿವಳಿಕೆ ನೀಡಿ ಸುಮಾರು ಅರ್ಧ ಗಂಟೆ ನಿಲ್ಲಿಸಲಾಗಿತ್ತು. ಆನೆ ಸಹಜ ಸ್ಥಿತಿಗೆ ಮರಳಿದಾಗ ಹಗ್ಗ, ಬೆಲ್ಟ್‌ಗಳನ್ನು ತೆಗೆದು ಹೊರಗೆ ಕರೆತರಲಾಯಿತು. ಆನೆಯ ಮುಂಬದಿಯ ಕಾಲುಗಳಿಗೆ ಚೈನ್ ಬಿಗಿದಿ ಸೋಮಣ್ಣನನ್ನು ಬಂಧಿ ಮಾಡಲಾಗಿತ್ತು. ಜನರತ್ತ ಮುಖ ಹೊರಳಿಸಿ ಅತ್ತಿತ್ತ ಸೊಂಡಿಲು ಆಡಿಸುತ್ತಾ ನಿಧಾನವಾಗಿ ಮುಂದೆ ಸಾಗಿತು.