ಶಿವಮೊಗ್ಗ: ಕಂಪನಿಯೊಂದರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿ ವೃದ್ಧರೊಬ್ಬರಿಗೆ 10.49 ಲಕ್ಷ ರೂ. ಹಣ ವಂಚಿಸಲಾಗಿದೆ.
ಶಿವಮೊಗ್ಗ ಆಲ್ಕೊಳದ 62ವರ್ಷದ ವೃದ್ಧ ವಂಚನೆಗೆ ಒಳಗಾದವರು. ಮೊಬೈಲ್‌ನಲ್ಲಿ ಯೂಟ್ಯೂಬ್ ನೋಡುತ್ತಿದ್ದಾಗ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುತ್ತೇವೆ ಎಂಬ ಜಾಹೀರಾತು ಕಾಣಿಸಿತ್ತು. ಅದನ್ನು ನಂಬಿದ ವೃದ್ಧ ಲಿಂಕ್ ಓಪನ್ ಮಾಡಿದ್ದರು.
ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ವಾಟ್ಸ್‌ಆ್ಯಪ್ ತೆರೆದುಕೊಂಡಿದ್ದು, ಸೋನಲ್ ಎಂಬ ಯುವತಿಯ ಮೊಬೈಲ್ ನಂಬರ್ ಕಾಣಿಸಿತ್ತು. ವೃದ್ಧರು ಆ ನಂಬರ್‌ಗೆ ಮೆಸೇಜ್ ಮಾಡಿದಾಗ 50 ಸಾವಿರ ರೂ. ಹೂಡಿಕೆ ಮಾಡುವಂತೆ ಆಕೆ ತಿಳಿಸಿದ್ದಳು. ಅದರಂತೆ ವೃದ್ಧ 50 ಸಾವಿರ ರೂ. ಹೂಡಿಕೆ ಮಾಡಿದ್ದು, ವಂಚಕರು ಸೂಚಿಸಿದ ಆ್ಯಪ್ ಒಂದನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು. ದಿನ ಕಳೆದಂತೆ ಆ್ಯಪ್‌ನಲ್ಲಿ ಲಾಭ ತೋರಿಸುತ್ತಿದ್ದ ಹಿನ್ನೆಲೆಯಲ್ಲಿ ವೃದ್ಧ ಆ.24ರಿಂದ ಸೆ.9ರವರೆಗೆ ಹಂತ ಹಂತವಾಗಿ 10,40,156 ರೂ. ಹೂಡಿಕೆ ಮಾಡಿದ್ದರು.
ಕೆಲ ದಿನಗಳ ನಂತರ ವಂಚಕರು ಮತ್ತೆ 74 ಲಕ್ಷ ರೂ. ಹಣ ಹಾಕುವಂತೆ ವೃದ್ಧನಿಗೆ ತಿಳಿಸಿದ್ದರು. ಯಾವುದೇ ಲಾಭವೂ ಕೈಗೆ ಸಿಗದೆ, ಸುಮ್ಮನೆ ಹಣ ವ್ಯರ್ಥವಾಗುತ್ತಿರುವುದನ್ನು ಅರಿತ ವೃದ್ಧ ಮತ್ತಷ್ಟು ಹಣ ಹಾಕಲು ನಿರಾಕರಿಸಿ ಆ್ಯಪ್‌ನಲ್ಲಿ ತೋರಿಸಿದ್ದ ಬಾಕಿ ಹಣ ಹಿಂಪಡೆಯಲು ಯತ್ನಿಸಿದ್ದಾರೆ. ಆದರೆ ಆ ಹಣ ವಿತ್‌ಡ್ರಾ ಆಗಲಿಲ್ಲ. ಆ ಸಂದರ್ಭದಲ್ಲಿ ತಾನು ಮೋಸ ಹೋಗಿರುವುದನ್ನು ಅರಿತ ವೃದ್ಧ, ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.