ಸಾಗರದ ಭೀಮನಕೋಣೆ ಮುಖ್ಯರಸ್ತೆಯಲ್ಲಿರುವ ವೃದ್ಧ ದಂಪತಿ ಗಜಾನನ ಮತ್ತು ಭಾರತಿ.
ಸಾಗರ: ಆಧಾರ್ ಕಾರ್ಡ್ ಸಮಸ್ಯೆಯಿಂದ ಸಾಮಾಜಿಕ ಭದ್ರತಾ ಯೋಜನೆಯ ಸೌಲಭ್ಯದಿಂದ ವಂಚಿತವಾಗಿರುವ ಸಾಗರದ ಭೀಮನಕೋಣೆ ಮುಖ್ಯರಸ್ತೆಯಲ್ಲಿರುವ ವೃದ್ಧ ದಂಪತಿ ಗಜಾನನ ಮತ್ತು ಭಾರತಿ ಅವರ ಮನೆಗೆ ಅಧಿಕಾರಿಗಳು ಬಧವಾರ ದೌಡಾಯಿಸಿದ್ದಾರೆ.
ದಂಪತಿ ಅನುಭವಿಸುತ್ತಿದ್ದ ಸಂಕಷ್ಟ ಕುರಿತು ಮಾದ್ಯಮಗಳಲ್ಲಿ ವರದಿ ಪ್ರಕಟವಾಗಿದ್ದನ್ನು ಗಮನಿಸಿದ್ದ ಉಪಲೋಕಾಯುಕ್ತ ಕೆ.ಎಂ.ಫಣೀಂದ್ರ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ಸಂತ್ರಸ್ತರ ಮನೆಗೆ ಸಾಗರ ಉಪವಿಭಾಗಾಧಿಕಾರಿ ವೀರೇಶ್‌ಕುಮಾರ್ ಒಳಗೊಂಡಂತೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಾಗರ ತಹಸೀಲ್ದಾರ್ ರಶ್ಮಿ, ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ, ಸಂತ್ರಸ್ತರ ಮನೆಗೆ ಭೇಟಿ ನೀಡಿ ಆಧಾರ್ ಕಾರ್ಡ್ ನೋಂದಣಿ ಮಾಡಲಾಗಿದೆ. ಅವರ ಮತದಾರರ ಗುರುತಿನ ಚೀಟಿಯನ್ನೂ ನೀಡಿದ್ದೇವೆ. ಅವರ ಕೈಗಳನ್ನು ಬಿಡಿಸಿ ಹೆಬ್ಬೆಟ್ಟಿನ ಗುರುತನ್ನು ತೆಗೆದುಕೊಳ್ಳುವುದು ಕೂಡಾ ಕಷ್ಟ ಆಗಿರುವುದರಿಂದ ಈ ಸಮಸ್ಯೆ ಎದುರಾಗಿದೆ. ತಕ್ಷಣವೇ ಸಾಮಾಜಿಕ ಭದ್ರತಾ ಯೋಜನೆ ಸೌಲಭ್ಯ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಎಸಿ ವೀರೇಶ್‌ಕುಮಾರ್ ಮಾತನಾಡಿ, ವೃದ್ಧ ದಂಪತಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದೇವೆ. ಕೂಲಿ ಕೆಲಸ ಮಾಡಿ ಪತ್ನಿಯನ್ನು ಸಾಕುತ್ತಿರುವ ಗಜಾನನ ಅವರಿಗೆ ತುರ್ತಾಗಿ ಮನೆ ವ್ಯವಸ್ಥೆ ಮತ್ತು ದಿನನಿತ್ಯ ಕೃಷಿ ಸಂಬಂಧಿ ಕೆಲಸ ಮಾಡಲು ಅನುಕೂಲ ಮಾಡಿರುವುದಾಗಿ ತಿಳಿದುಬಂದಿದೆ ಎಂದು ತಿಳಿಸಿದರು.
ಸಂತ್ರಸ್ತ ಗಜಾನನ ಮಾತನಾಡಿ, ನಾನು ಕೃಷಿ ಕೂಲಿ ಕೆಲಸ ಮಾಡಿ ಜೀವನ ನಿಭಾಯಿಸುತ್ತಿದ್ದೇನೆ. ಕಳೆದ 6 ವರ್ಷಗಳಿಂದ ಪತ್ನಿಯನ್ನು ನೋಡಿಕೊಳ್ಳುವ ಜವಾಬ್ದಾರಿಯೂ ನನ್ನದಾಗಿದೆ. ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನಚೀಟಿ ಇಲ್ಲದೆ ಸಮಸ್ಯೆ ಉಂಟಾಗಿತ್ತು. ಅಧಿಕಾರಿಗಳು ಕೂಡಲೇ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.