ಶಿವಮೊಗ್ಗದಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಡಾ. ರಘುನಂದನ್ ಚಾಲನೆ ನೀಡಿದರು. ಡಾ. ಗೀತಾ, ಡಾ, ಮಲ್ಲಪ್ಪ, ಜಿ.ವಿಜಯಕುಮಾರ್, ಡಾ. ಚಂದ್ರಶೇಖರ್ ಇತರರಿದ್ದರು.
- ಪೋಲಿಯೋ ಹನಿಗಳು ಸುರಕ್ಷಿತ
- ಅಭಿಯಾನದ ಜಿಲ್ಲಾ ನೋಡಲ್ ಅಧಿಕಾರಿ ಡಾ. ರಘುನಂದನ್ ಹೇಳಿಕೆ
- ಐದು ವರ್ಷದ ಒಳಗಿನ ಪ್ರತಿ ಮಗುವಿಗೂ ಲಸಿಕೆ ಹಾಕಿಸಿ
ಶಿವಮೊಗ್ಗ: ಪೋಲಿಯೋ (polio) ಹನಿಗಳು ಸಂಪೂರ್ಣವಾಗಿ ಉಚಿತ, ಸುರಕ್ಷಿತ (safe) ಮತ್ತು ಹೆಚ್ಚು ಪರಿಣಾಮಕಾರಿ. ರೋಗ ನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಮತ್ತು ನೆರೆಯ ದೇಶಗಳಿಂದ ಬರುವ ಪೋಲಿಯೋ ವೈರಸ್ (virus) ತಡೆಯುವ ನಿಟ್ಟಿನಲ್ಲಿ ಪೋಲಿಯೋ ಹನಿಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಪಲ್ಸ್ ಪೋಲಿಯೋ ಅಭಿಯಾನದ ಜಿಲ್ಲಾ ನೋಡಲ್ ಅಧಿಕಾರಿ ಡಾ. ರಘುನಂದನ್ ಹೇಳಿದರು.
ಭಾನುವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ದೇಶಾದ್ಯಂತ ನಡೆಯುತ್ತಿರುವ ಅಭಿಯಾನವು ಪೋಲಿಯೋ ಮುಕ್ತ ಭಾರತವನ್ನು ಮತ್ತಷ್ಟು ಸದೃಢಗೊಳಿಸಲು ಸಹಕಾರಿಯಾಗಿದೆ. ಐದು ವರ್ಷಕ್ಕಿಂತ ಕಡಿಮೆ ವಯೋಮಾನದ ಪ್ರತಿ ಮಗುವಿಗೂ ಪೋಲಿಯೋ ಹನಿ ಕೊಡಿಸಬೇಕು ಎಂದರು.
ಡಿಎಚ್‌ಒ ಡಾ. ಕೆ.ಎಸ್.ನಟರಾಜ್ ಮಾತನಾಡಿ, ಮಕ್ಕಳಿಗೆ ಹಿಂದಿನ ಅಭಿಯಾನದಲ್ಲಿ ಪೋಲಿಯೋ ಹನಿ ನೀಡಿದ್ದರೂ, ಪ್ರಸ್ತುತ ಸ್ವಲ್ಪ ಅಸ್ವಸ್ಥತೆ ಇದ್ದರೂ ಪೋಲಿಯೋ ಹನಿ ಕೊಡಿಸಬೇಕು. ಸಂಪೂರ್ಣ ಸುರಕ್ಷಿತವಾಗಿದೆ, ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಸರ್ಜನ್ ಡಾ.ಗೀತಾ ಮಾತನಾಡಿ, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮಗ್ರ ಶಿಶು ಅಭಿವೃದ್ಧಿ ಯೋಜನಾ ಕೇಂದ್ರಗಳು ಶಾಲೆಗಳು ಮತ್ತು ಇತರ ಪ್ರಮುಖ ಕೇಂದ್ರಗಳಲ್ಲಿ ಪೋಲಿಯೋ ಹನಿ ನೀಡಲಾಗುವುದು. ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಶಿಕ್ಷಕರು ಮತ್ತು ರೋಟರಿ ಸ್ವಯಂಸೇವಕರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಜಿಲ್ಲಾ ಲಸಿಕಾಧಿಕಾರಿ ಡಾ. ಮಲ್ಲಪ್ಪ, ಶಿವಮೊಗ್ಗ ಟಿಎಚ್‌ಒ ಡಾ. ಚಂದ್ರಶೇಖರ್ ಇತರರಿದ್ದರು.
ಜಿಲ್ಲೆಯಲ್ಲಿ 1.23 ಲಕ್ಷ ಗುರಿ
ಜಿಲ್ಲೆಯಲ್ಲಿ 5 ವರ್ಷದೊಳಗಿನ ಒಟ್ಟು 1,23,388 ಮಕ್ಕಳಿದ್ದು, ಎಲ್ಲರಿಗೂ ಲಸಿಕೆ ತಲುಪಿಸುವ ಗುರಿ ಹೊಂದಲಾಗಿತ್ತು. ಇದಕ್ಕಾಗಿ ಜಿಲ್ಲಾದ್ಯಂತ 17 ಮೊಬೈಲ್ ಮತ್ತು 36 ಸಂಚಾರಿ ಕೇಂದ್ರಗಳು ಸೇರಿದಂತೆ ಒಟ್ಟು 1,069 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿ ಸಾರ್ವಜನಿಕ ಸ್ಥಳಗಳಲ್ಲೂ ಮಕ್ಕಳಿಗೆ ಲಸಿಕೆ ಲಭ್ಯವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಭಿಯಾನ ಯಶಸ್ಸಿಗೆ 3,889 ಸಿಬ್ಬಂದಿ ನೇಮಿಸಲಾಗಿದೆ. 194 ವೈದ್ಯಕೀಯ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಮೇಲ್ವಿಚಾರಕರನ್ನು ಉಸ್ತುವಾರಿಗೆ ನಿಯೋಜಿಸಲಾಗಿತ್ತು.