ಶಿವಮೊಗ್ಗ ತಾಲೂಕಿನ ಲಿಂಗಾಪುರದ ಸರ್ಕಾರಿ ಶಾಲೆ ಮಕ್ಕಳು ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ ಕೈಗೊಂಡರು. 
ಶಿವಮೊಗ್ಗ

ಸರ್ಕಾರಿ ಶಾಲೆ ಐಕ್ಳಿಗೆ ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ | Educational tour

ಪ್ರಮುಖ ಮುಖ್ಯಾಂಶಗಳು

  • ಲೋಹದ ಹಕ್ಕಿಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಾರಾಟ
  • ಶಿವಮೊಗ್ಗದಿಂದ ಬೆಂಗಳೂರಿಗೆ ಹಾರಿದ ಲಿಂಗಾಪುರ ಶಾಲೆ ಮಕ್ಕಳು
ಶಿವಮೊಗ್ಗ: ಗ್ರಾಮೀಣ ಭಾಗದ, ಅದರಲ್ಲೂ ಸರ್ಕಾರಿ ಶಾಲೆ ಮಕ್ಕಳಿಗೆ ಅಲ್ಲಿನ ಶಿಕ್ಷಕರು ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ ಕರೆದೊಯ್ದಿದ್ದಾರೆ !
ತಾಲೂಕಿನ ಉಂಬ್ಲೇಬೈಲು ಸಮೀಪದ ಲಿಂಗಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಶೈಕ್ಷಣಿಕ ಪ್ರವಾಸ(Educational tour)ವನ್ನು ವಿಮಾನಯಾನ(Aviation)ದ ಮೂಲಕ ಕೈಗೊಂಡಿದ್ದಾರೆ.
ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ ಕರೆದೊಯ್ಯುವ ಮೂಲಕ ಅಲ್ಲಿನ ಹಲವು ಸ್ಥಳಗಳನ್ನು ವೀಕ್ಷಿಸಿ ಪ್ರವಾಸದ ವಿಶೇಷ ಅನುಭವದ ಬುತ್ತಿಯೊಂದನ್ನು ಹೊತ್ತು ಬಂದಿದ್ದಾರೆ. ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಪ್ರವಾಸವನ್ನು ಸಾಮಾನ್ಯವಾಗಿ ಬಸ್(bus), ಟಿಟಿ(ಟೆಂಪೋ ಟ್ರಾವೆಲ್ಸ್)  ಮೂಲಕ ಮಾಡಿಸುತ್ತಾರೆ. ಆದರೆ ಲಿಂಗಾಪುರ(Lingapura)ಶಾಲೆಯ ಮಕ್ಕಳು ವಿಮಾನಯಾನದ ಮೂಲಕ ಶೈಕ್ಷಣಿಕ ಪ್ರವಾಸ ಮುಗಿಸಿಕೊಂಡು ಬಂದಿರುವುದು ನಿಜಕ್ಕೂ ವಿಶೇಷವೇ ಆಗಿದೆ. 
ಗ್ರಾಮೀಣ ಮಕ್ಕಳಿಗೆ ಹೊಸ ಜ್ಞಾನ(Knowledge)ಮತ್ತು ಅನುಭವ ನೀಡಬೇಕೆನ್ನುವ ಉದ್ದೇಶದೊಂದಿಗೆ ಈ ಶಾಲೆಯ ಶಿಕ್ಷಕರು ನಡೆಸಿದ್ದ ಪ್ರಯತ್ನಕ್ಕೆ ಗ್ರಾಮಸ್ಥರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸಹಕಾರವೂ ಸಿಕ್ಕಿದ್ದು, ಪ್ರವಾಸ ಯಶಸ್ಸಿಗೆ ಕಾರಣವಾಗಿದೆ.

6ರಿಂದ 7ನೇ ತರಗತಿ ಮಕ್ಕಳಿಗೆ ಸೀಮಿತ

ಗ್ರಾಮೀಣ ಮಕ್ಕಳಿಗೂ ಒಂದು ವಿಶೇಷ ಅನುಭವ ಸಿಗಲಿ ಎನ್ನುವ ಉದ್ದೇಶದೊಂದಿಗೆ ಶಾಲೆಯ ಸಿಬ್ಬಂದಿ ಸೇರಿ ಈ ಯೋಜನೆ ಹಾಕಿಕೊಂಡಿದ್ದರು. 6ರಿಂದ 7ನೇ ತರಗತಿ ಮಕ್ಕಳಿಗೆ ಸೀಮಿತಗೊಳಿಸಿ ಅದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನ ಮತ್ತು ಪೂರ್ವಾನುಮತಿ ಪಡೆದು ಇತ್ತೀಚೆಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣ ಕೈಗೊಂಡಿದ್ದರು. 
ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ, ಜವಹರಲಾಲ್ ನೆಹರೂ ತಾರಾಲಯ ವೀಕ್ಷಿಸಿ ವಿಜ್ಞಾನ, ತಂತ್ರಜ್ಞಾನ ಮತ್ತು ಬಾಹ್ಯಾಕಾಶ ವಿಜ್ಞಾನಗಳ ಬಗ್ಗೆ ಮಕ್ಕಳು ನೇರ ಅನುಭವ ಪಡೆಯುವ ಅವಕಾಶ ಪಡೆದರು. ವಿಧಾನಸೌಧಕ್ಕೆ ಭೇಟಿ ನೀಡಿ ಕಟ್ಟಡದ ವಾಸ್ತುಶಿಲ್ಪ ಮತ್ತು ಸಭಾಂಗಣಗಳಲ್ಲಿ ನಡೆಯುವ ಸಭೆಗಳ ಕಾರ್ಯವೈಖರಿ ತಿಳಿದುಕೊಂಡು ಊರಿಗೆ ವಾಪಸ್ ಆಗಿದ್ದಾರೆ.
ಪುಟ್ಟ ಗ್ರಾಮದ ಮಕ್ಕಳಲ್ಲಿ ಎತ್ತರದ ಕನಸುಗಳನ್ನು ಬೆಳೆಸುವ ಉದ್ದೇಶದಿಂದ ವಿಮಾನಯಾನದ ಅನುಭವ ನೀಡುವ ಯೋಜನೆ ಶಿಕ್ಷಕರ ವೃಂದದಿಂದ ರೂಪಿಸಲಾಗಿತ್ತು. ಮೊದಲ ಬಾರಿಗೆ ವಿಮಾನ ಹತ್ತಿದ ಮಕ್ಕಳ ಸಂತೋಷ ಅಮೋಘವಾಗಿತ್ತು. ಈ ಶೈಕ್ಷಣಿಕ ಪ್ರವಾಸವು ಮಕ್ಕಳಿಗೆ ಪುಸ್ತಕದಾಚೆಯ ಜ್ಞಾನ ನೀಡಿ, ಭವಿಷ್ಯದಲ್ಲಿ ದೊಡ್ಡ ಕನಸು ಕಾಣಲು ಪ್ರೇರಣೆ ನೀಡಿತು ಎನ್ನುತ್ತಾರೆ ಸಹ ಶಿಕ್ಷಕಿ ರೂಪಶ್ರೀ.
"

ಕಳೆದ ವರ್ಷ ಮಕ್ಕಳನ್ನು ಶಿವಮೊಗ್ಗ ವಿಮಾನ ನಿಲ್ದಾಣ ವೀಕ್ಷಣೆಗೆ ಕರೆದುಕೊಂಡು ಹೋದಾಗ ಅಲ್ಲಿ ಬೋರ್ಡಿಂಗ್ ಪಾಸ್ ಇಲ್ಲದ ಕಾರಣ ಒಳಗಡೆ ಬಿಡಲಿಲ್ಲ. ಹಾಗಾಗಿ ಮಕ್ಕಳಿಗೆ ವಿಮಾನಗಳ ಹಾರಾಟವನ್ನು ಹತ್ತಿರದಿಂದ ನೋಡುವುದಕ್ಕೆ ಆಗಿರಲಿಲ್ಲ. ಹಾಗಾಗಿ ಶೈಕ್ಷಣಿಕ ಪ್ರವಾಸವನ್ನು ಈ ಬಾರಿ ವಿಮಾನದಲ್ಲೇ ಕೈಗೊಂಡಿದ್ದೇವು.