ಶಿಕಾರಿಪುರದಲ್ಲಿ ಶ್ರೀ ಮರಿಯಮ್ಮ ದೇವಿ ಬಂಜಾರ ಪತ್ತಿನ ಸಹಕಾರ ಸಂಘದಿಂದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು. ಬಿ.ವೈ.ವಿಜಯೇಂದ್ರ, ರಮೇಶ್ ನಾಯ್ಕ, ಗಂಗಾನಾಯ್ಕ ಇತರರಿದ್ದರು. 
ಶಿವಮೊಗ್ಗ

ಸಹಕಾರ ಸಂಘದಿಂದ ಆರ್ಥಿಕ ಸಬಲೀಕರಣ

ಸೋಮಶೇಖರ ಎನ್
ಶಿಕಾರಿಪುರ: ಬಂಜಾರ ಸಮಾಜದ ಅನೇಕರು ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿದ್ದಾರೆ. ಸ್ವಾಭಿಮಾನಿ ಹಾಗೂ ಪರಿಶ್ರಮದಿಂದ ಜೀವನ ನಡೆಸುವ ಸಮಾಜ ಆಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಬಂಜಾರ ಭವನದಲ್ಲಿ ಆಯೋಜಿಸಿದ್ದ ಶ್ರೀ ಮರಿಯಮ್ಮ ದೇವಿ ಬಂಜಾರ ಪತ್ತಿನ ಸಹಕಾರ ಸಂಘ ಸಂಸ್ಥೆ ಉದ್ಘಾಟನೆಯಲ್ಲಿ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬಂಜಾರ ಸಮುದಾಯದ ಅಭ್ಯುದಯಕ್ಕೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದು ತಿಳಿಸಿದರು.
ಸಹಕಾರ ಚಿಂತನೆಗಳು ಅತ್ಯಂತ ಶ್ರೇಷ್ಠ. ಪ್ರತಿ ಸಮುದಾಯದ ಹಿತ ಕಾಪಾಡಲು, ಆರ್ಥಿಕ ಪರಿಸ್ಥಿತಿ ಸುಧಾರಿಸಲು ಇಂತಹ ಸಹಕಾರ ಸಂಘಗಳು ಅಗತ್ಯ. ಬಂಜಾರ ಸಮಾಜ ಸಾಂಸ್ಕೃತಿಕ ಹಾಗೂ ಸಹಕಾರ ಕ್ಷೇತ್ರದಲ್ಲೂ ವಿಶೇಷ ಛಾಪು ಮೂಡಿಸಲಿದೆ. ಪರಸ್ಪರ ಸಹಕಾರ, ಉಳಿತಾಯ ಮತ್ತು ಆರ್ಥಿಕ ಶಿಸ್ತಿನ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕಿಂಗ್ ಸೌಲಭ್ಯ ತಲುಪಬೇಕು ಎಂದರು.
ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಬಂಜಾರ ಸಮುದಾಯದ ಸಂಸ್ಕೃತಿ ಮತ್ತು ಆಚರಣೆಗಳು ವಿಶಿಷ್ಟ. ಅವರ ಪಾರಂಪರಿಕ ಶೈಲಿ ಉಡುಪುಗಳು, ವಿಶೇಷವಾದ ಆಹಾರ ಪದ್ಧತಿ ಅದ್ಭುತವಾಗಿವೆ. ಬಂಜಾರ ಸಮಾಜ ನಾಡಿನ ಹಿರಿಮೆ ಎಂದು ತಿಳಿಸಿದರು.
ಸಂತ ಸೇವಾಲಾಲ್ ಅವರ ಜನ್ಮಸ್ಥಳ ಸೂರಗೊಂಡನಕೊಪ್ಪ ಅಭಿವೃದ್ಧಿಗೆ ಯಡಿಯೂರಪ್ಪ ಅವರು ಸಾಕಷ್ಟು ಅನುದಾನ ನೀಡಿದ್ದರು. ತಾಂಡಾಗಳ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿ ಅನುದಾನ ನೀಡಿದ್ದರು ಎಂದರು.
ಶ್ರೀ ಸೈನಾ ಭಗತ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಎಸ್.ಪಿ.ನಾಗರಾಜ್ ಗೌಡ, ಸಹಕಾರ ಸಂಘದ ಅಧ್ಯಕ್ಷ ರಮೇಶ್ ನಾಯ್ಕ, ಸಮಾಜದ ಅಧ್ಯಕ್ಷ ಗಂಗಾನಾಯ್ಕ, ಲೋಹಿತ್ ನಾಯ್ಕ, ರಾಘು, ಮಂಜಾನಾಯ್ಕ, ಜಯನಾಯ್ಕ, ವಿಜಯಲಕ್ಷ್ಮೀ, ಸುರೇಶ್ ನಾಯ್ಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಇತರರಿದ್ದರು.