ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ 
ಶಿವಮೊಗ್ಗ

ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ I early election

ಪ್ರಮುಖ ಮುಖ್ಯಾಂಶಗಳು

  • ಸಿಎಂ ಬದಲಾವಣೆ ಕಾಂಗ್ರೆಸ್ ಅವನತಿಯ ಮುನ್ಸೂಚನೆ
  • ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ
ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiaha) ಅವರನ್ನು ಕೆಳಗಿಳಿಸಿ ಬೇರೆ ಯಾರನ್ನೇ ಸಿಎಂ ಮಾಡಿದರೂ ಅದು ತಾತ್ಕಾಲಿಕ. ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ (election) ನಡೆಯುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (vijayendra) ಹೇಳಿದರು.
ರಾಜ್ಯ ಸರ್ಕಾರದ ವೈಫಲ್ಯವನ್ನು ಗಮನಿಸಿಯೇ ಕಾಂಗ್ರೆಸ್ ಹೈಕಮಾಂಡ್ ಸಿಎಂ ಬದಲಾವಣೆಗೆ ಮುಂದಾಗಿದೆ. ಸಿಎಂ ಬದಲಾವಣೆ ವಿಚಾರವಾಗಿ ಚರ್ಚಿಸಲು ದೆಹಲಿಯಲ್ಲಿ ಐದು ತಾಸುಗಳ ಮ್ಯಾರಥಾನ್ ಸಭೆ ನಡೆಸಲಾಗಿದೆ. ಆಡಳಿತ ವೈಫಲ್ಯ ಹಾಗೂ ಭ್ರಷ್ಟಾಚಾರ ಆರೋಪವಿರುವ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಇದು ಕಾಂಗ್ರೆಸ್ ಅವನತಿಯ ಮುನ್ಸೂಚನೆಯೂ ಹೌದು ಎಂದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬಳಿಕ ಯಾರು ಮುಖ್ಯಮಂತ್ರಿಯಾದರೂ ಸರ್ಕಾರ ಸಲೀಸಾಗಿ ನಡೆಯುವುದಿಲ್ಲ. ಗೊಂದಲ ಶುರುವಾಗಲಿದೆ. ಯಾರು ಮುಖ್ಯಮಂತ್ರಿ ಆಗುತ್ತಾರೆ ಎನ್ನುವುದಕ್ಕಿಂತ ಕಾಂಗ್ರೆಸ್ ಹೈಕಮಾಂಡ್ ಈ ಸರ್ಕಾರದ ವೈಫಲ್ಯವನ್ನು ಒಪ್ಪಿಕೊಂಡಿದೆ. ದೇಶದಲ್ಲಿ ಕಾಂಗ್ರೆಸ್ ಅವನತಿ ಆರಂಭವಾಗಿದೆ ಎನ್ನಬಹುದು. ಇಲ್ಲಿ ಸಿಎಂ ಬದಲಾವಣೆ ಬಳಿಕ ಮತ್ತೊಂದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಂತಾಗುತ್ತದೆ ಎಂದು ಭವಿಷ್ಯ ನುಡಿದರು.
ಸಾಲದಲ್ಲಿ ದಾಖಲೆ
ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ 10 ಲಕ್ಷ ಕೋಟಿ ರೂ. ಸಾಲ ಮಾಡುವ ಮೂಲಕ ಸಿದ್ದರಾಮಯ್ಯ ದಾಖಲೆ ನಿರ್ಮಿಸಿದ್ದಾರೆ. ಉಪಚುನಾವಣೆ ಗೆಲುವು ಅವರ ಸಾಧನೆಗೆ ಮಾನದಂಡವಲ್ಲ. ಆಂತರಿಕ ಕಚ್ಚಾಟದಿಂದ ಕಾಂಗ್ರೆಸ್ ಆಡಳಿತ ಯಂತ್ರ ಕುಸಿದಿದೆ. ಇದು ಭ್ರಷ್ಟ ಸರ್ಕಾರ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಒಪ್ಪಿಕೊಂಡಂತಾಗಿದೆ ಎಂದು ವಿಜಯೇಂದ್ರ ಟೀಕಿಸಿದರು.
ಸಿದ್ದರಾಮಯ್ಯ ಅತಿಹೆಚ್ಚು ಅನುಭವವಿರುವ ಮುಖ್ಯಮಂತ್ರಿ. ಆದರೂ ಅವರ ಅವಧಿಯಲ್ಲಿ ಅಪಾರ ಪ್ರಮಾಣದ ಸಾಲವಾಗಿದೆ. ಆಂತರಿಕ ಕಚ್ಚಾಟದಿಂದ ಆಡಳಿತ ಸಂಪೂರ್ಣ ಕುಸಿದುಹೋಗಿದೆ. ವಾಲ್ಮೀಕಿ, ಮೂಡಾ ಹೀಗೆ ಹಲವು ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಸರ್ಕಾರಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡ ಏಕೈಕ ರಾಜ್ಯ ಕರ್ನಾಟಕ ಎಂದು ವಾಗ್ದಾಳಿ ನಡೆಸಿದರು.
ಜನರ ವಿಶ್ವಾಸ ಗಳಿಸಿದ ಮೋದಿ
ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ 12 ವರ್ಷ ಪೂರೈಸಿದೆ. ಯುಪಿಎ ಅವಧಿಯಲ್ಲಿ ಅತ್ಯಂತ ಭ್ರಷ್ಟ ಆಡಳಿತವಿತ್ತು. ಜನರು ಆ ಸರ್ಕಾರದ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದರು. ಆ ಸಂದರ್ಭದಲ್ಲಿ ದೇಶದ ಚುಕ್ಕಾಣಿ ಹಿಡಿದು ಅಭಿವೃದ್ಧಿಪಥದತ್ತ ದೇಶವನ್ನು ಕೊಂಡೊಯ್ದು ನರೇಂದ್ರ ಮೋದಿ ಜನತೆಯ ವಿಶ್ವಾಸ ಗಳಿಸಿದ್ದಾರೆ. ಇದುವರೆಗೆ ಅವರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪ ಬಂದಿಲ್ಲ. ಕರೊನಾ ಸಂದರ್ಭದಲ್ಲಿ ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿದ ನಿದರ್ಶನ ನಮ್ಮ ಮುಂದಿದೆ. ವಿಶ್ವದಲ್ಲೇ ಭಾರತ ನಾಲ್ಕನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗುವತ್ತ ಮುನ್ನುಗ್ಗುತ್ತಿದೆ ಎಂದು ವಿಜಯೇಂದ್ರ ಹೇಳಿದರು.