ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ.
- ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಷಯ ಸುಳ್ಳು
- ಪರಿಷ್ಕರಣೆ ಬಗ್ಗೆ ಯಾವುದೇ ಅಧಿಕೃತ ಸೂಚನೆಗಳು ಸರ್ಕಾರದಿಂದ ಹೊರಬಿದ್ದಿಲ್ಲ
- ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ ಸ್ಪಷ್ಟನೆ
ಶಿವಮೊಗ್ಗ: ಪಂಚ ಗ್ಯಾರಂಟಿ(Panch Guarantee)ಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಅಪ್‌ಡೇಟ್ ಮಾಡಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಷಯ ಸುಳ್ಳು. ಸಾರ್ವಜನಿಕರು ಇವುಗಳಿಗೆ ಕಿವಿಗೊಡಬಾರದೆಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ(C.S.Chandrabhupal) ಸ್ಪಷ್ಟಪಡಿಸಿದ್ದಾರೆ.
ವಿವಿಧ ಸಾಮಾಜಿಕ ಜಾಲತಾಣ(Social network)ಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿಯನ್ನೇ ನಿಜವೆಂದು ನಂಬಿ ಫಲಾನುಭವಿಗಳು ಖಾಸಗಿ ಸೈಬರ್ ಕೇಂದ್ರಗಳು, ಗ್ರಾಮ್ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರ(Karnataka One Center)ಗಳಲ್ಲಿ ಮುಗಿಬೀಳುತ್ತಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸೈಬರ್ ಕೇಂದ್ರಗಳಿಗೆ ಅಲೆದಾಡಿ ತೊಂದರೆಗೆ ಒಳಗಾಗಬಾರದೆಂದು ಹೇಳಿಕೆ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆ(Grihalakshmi Yojane)ಯ ಫಲಾನುಭವಿಗಳ ಪರಿಷ್ಕರಣೆ ಮಾಡುವುದು ರಾಜ್ಯ ಸರ್ಕಾರದ ಉದ್ದೇಶವಾಗಿದ್ದರೂ ಈ ಪರಿಷ್ಕರಣೆ ಯಾವ ಮಟ್ಟದಲ್ಲಿ ನಡೆಯಬೇಕು ಮತ್ತು ಯಾವ ಮಾರ್ಗಸೂಚಿ ಅನುಸರಿಸಬೇಕು ಎಂಬ ಬಗ್ಗೆ ಯಾವುದೇ ಅಧಿಕೃತ ಸೂಚನೆ(Official notice)ಗಳು ಸರ್ಕಾರದಿಂದ ಇನ್ನೂ ಹೊರಬಿದ್ದಿಲ್ಲ. ಇದುವರೆಗೆ ಒಟ್ಟು 30 ಕಂತುಗಳಲ್ಲಿ ಹಣ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಜಮೆ ಮಾಡಲಾಗಿದೆ. ಪ್ರಸ್ತುತ ಅಡಚಣೆಯಿಲ್ಲದೆ ಹಣ ಪಾವತಿಯಾಗುತ್ತಿದ್ದು, ಇ-ಕೆವೈಸಿ ನೆಪದಲ್ಲಿ ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬಾರದು ಎಂದಿದ್ದಾರೆ.