ಸೊರಬ ತಾಲೂಕು ಕಚೇರಿಯಲ್ಲಿ ಬರ ಅಧ್ಯಯನ ಮತ್ತು ಅಭಿವೃದ್ಧಿ ಕಾಮಗಾರಿಗಳ ಕುರಿತು ಸಚಿವ ಮಧು ಬಂಗಾರಪ್ಪ ಸಭೆ ನಡೆಸಿದರು. ಪ್ರಭುಲಿಂಗ ಕವಳಿಕಟ್ಟಿ, ಎನ್.ಹೇಮಂತ್, ಕೆ.ಪುರಂದರ, ಎಸ್ಪಿ ನಿಖಿಲ್, ಕೆ.ಆರ್.ಶಶಿಧರ್ ಇತರರಿದ್ದರು. 
ಶಿವಮೊಗ್ಗ

ಮಳೆ ಆಧರಿಸಿ ಬರ ಘೋಷಣೆ | meeting with officers

ಶಿವಕುಮಾರ ಎಸ್.ಪಿ.
ಸೊರಬ: ಮಳೆ ಕೊರತೆ ಸ್ವಲ್ಪಮಟ್ಟಿಗೆ ನೀಗಿದೆ. ಮುಂದಿನ ಎರಡು ವಾರದ ಮಳೆ ನೋಡಿಕೊಂಡು ಕೇಂದ್ರ ಸರ್ಕಾರದ ಮಾನದಂಡದ ಆಧಾರದ ಮೇಲೆ ಜಿಲ್ಲೆಯ ಬರಘೋಷಣೆ ನಿರ್ಧಾರ ಆಗಲಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಶುಕ್ರವಾರ ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಬರ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಜಿಲ್ಲಾ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಸಾಲಿನಲ್ಲಿ ಬೆಳೆ ಹಾನಿಗೀಡಾದ ರೈತರಿಗೆ ನ್ಯಾಯೋಚಿತವಾಗಿ ದೊರೆಯಬೇಕಾದ ಬೆಳೆ ಪರಿಹಾರ ದೊರೆಯಬೇಕು. ರೈತರಿಗೆ ಭರವಸೆ ಮೂಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಮಳೆಮಾಪನ ಕೇಂದ್ರಗಳನ್ನು ಕೂಡಲೇ ದುರಸ್ತಿ ಮಾಡಿಸಬೇಕು. ಕಳೆದ ವರ್ಷ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗಿರುವ ತಪ್ಪಾದ ಅಂಕಿ ಅಂಶಗಳಿಂದಾಗಿ ಪ್ರಸಕ್ತ ಸಾಲಿನ ಬೆಳೆಹಾನಿ ಪರಿಹಾರ ದೊರೆಯುವಲ್ಲಿ ವ್ಯತ್ಯಾಸಗಳಾಗದಂತೆ ಗಮನಹರಿಸಬೇಕು ಎಂದರು.
ಪ್ರಸಕ್ತ ಸಾಲಿನ ಏಪ್ರಿಲ್-ಮೇ ತಿಂಗಳಲ್ಲಿ ಬಿದ್ದ ಮಳೆಯಿಂದಾಗಿ ಭಾರಿ ಪ್ರಮಾಣದ ತೋಟಗಾರಿಕೆ ಬೆಳೆ ಹಾನಿಗೊಳಗಾಗಿದೆ. ಈ ಕುರಿತ ವರದಿಯನ್ನು ತಯಾರಿಸಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ ಅವರು, ಶೀಘ್ರವೇ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು.
ಈ ಬಾರಿ ಸೊರಬ ತಾಲೂಕಿನಲ್ಲಿ ಶೇ.32ರಷ್ಟು ಮಳೆ ಕೊರತೆ ಉಂಟಾಗಿದೆ. ಕೆರೆ ಕಟ್ಟೆಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಮುಖ್ಯವಾಗಿ ಮೆಕ್ಕೆಜೋಳ ಬಿತ್ತನೆಯಲ್ಲಿ ಹಿನ್ನೆಡೆಯಾಗಿದೆ. ಸಕಾಲದಲ್ಲಿ ಮಳೆ ಬಾರದ ಕಾರಣಕ್ಕೆ ನಿರೀಕ್ಷಿತ ಪ್ರಮಾಣದ ಇಳುವರಿ ಬರುವುದು ಕೂಡ ಕಷ್ಟವಾಗಿದೆ. ಈ ಬಾರಿ ಭತ್ತ ನಾಟಿ ಪ್ರದೇಶವೂ ಕಡಿಮೆಯಾಗುವ ಸಾಧ್ಯತೆ ಇದೆ ಎಂದರು.

ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇರುವುದಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಗೊಬ್ಬರ ವಿತರಣೆಗೆ ಕ್ರಮ ವಹಿಸಲಾಗಿದೆ. ಕೆರೆಗಳಿಗೆ ನೀರು ತುಂಬುವ ಕಾರ್ಯ ಪ್ರಗತಿಯಲ್ಲಿದೆ. ಸೊರಬ ತಾಲೂಕಿನ ಒಂದು ಗ್ರಾಮದಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತಿದೆ. ಕೆಲವೆಡೆ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ನೀರನ್ನು ಒದಗಿಸಲಾಗುತ್ತಿದೆ ಡಿಸಿ ಹೇಳಿದರು. ಜಿಲ್ಲೆಯಲ್ಲಿ 280 ಮಳೆ ಮಾಪನ ಕೇಂದ್ರಗಳಿದ್ದು, ಅವುಗಳಲ್ಲಿ ಜನವರಿ ವೇಳೆಗೆ 72 ಯಂತ್ರಗಳು ಮಾತ್ರ ಕ್ರಿಯಾಶೀಲವಾಗಿದ್ದವು. ಪ್ರಸ್ತುತ ಬಹಳಷ್ಟು ಮಳೆಮಾಪನ ಕೇಂದ್ರಗಳನ್ನು ದುರಸ್ತಿಗೊಳಿಸಲಾಗಿದೆ. ಇನ್ನೂ 22 ಮಳೆ ಮಾಪನ ಕೇಂದ್ರಗಳ ದುರಸ್ತಿಯಾಗಬೇಕಿದೆ. ಮುಂದಿನ ಒಂದು ವಾರದೊಳಗಾಗಿ ಸರಿಪಡಿಸಲಾಗುವುದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಸಿದರು.

ಜಿಪಂ ಸಿಇಒ ಎನ್.ಹೇಮಂತ್, ತಹಸೀಲ್ದಾರ್ ಕೆ.ಪುರಂದರ, ಎಸ್ಪಿ ನಿಖಿಲ್, ಇಒ ಕೆ.ಆರ್.ಶಶಿಧರ್ ಇತರರಿದ್ದರು.