ಡಾ.ಸಮೀಕ್ಷಾ ರೆಡ್ಡಿ ಸಾವಿಗೆ ಪರೋಕ್ಷವಾಗಿ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆಯ ವಾಟಾಳ್ ಮಂಜುನಾಥ್, ಸತೀಶ್ ಗೌಡ, ಪ್ರವೀಣ್, ಲೋಕೇಶ್, ರಾಘವೇಂದ್ರ, ರವಿಕುಮಾರ್ ಮುಂತಾದವರು ಪ್ರತಿಭಟನೆ ನಡೆಸಿದರು. 
ಶಿವಮೊಗ್ಗ

ಡಾ.ಸಮೀಕ್ಷಾ ರೆಡ್ಡಿ ಪ್ರಕರಣ ಉನ್ನತ ತನಿಖೆಗೆ ವಹಿಸಿ I sameeksha investigation

ಪ್ರಮುಖ ಮುಖ್ಯಾಂಶಗಳು

  • ಸಾವಿಗೆ ಕಾರಣರಾದವರನ್ನು ಸೇವೆಯಿಂದ ವಜಾಗೊಳಿಸಿ
  • ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಪ್ರಮುಖರಿಂದ ಪ್ರತಿಭಟನೆ
  • ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ
ಶಿವಮೊಗ್ಗ: ತ್ಯಾವರೆಕೊಪ್ಪ (tyavarekoppa) ಸಫಾರಿಯಲ್ಲಿ ತರಬೇತಿನಿರತ ಪಶುವೈದ್ಯೆ ಡಾ.ಸಮೀಕ್ಷಾ (sameeksha) ರೆಡ್ಡಿ ಸಾವಿನ ಪ್ರಕರಣವನ್ನು ಉನ್ನತ (higher) ಮಟ್ಟದ ತನಿಖೆಗೆ ವಹಿಸಬೇಕು. ಅವರ ಸಾವಿಗೆ ಕಾರಣರಾದವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಪ್ರಮುಖರು ಮಂಗಳವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತ್ಯಾವರೆಕೊಪ್ಪ ಪ್ರಾಣಿ ಸಂಗ್ರಹಾಲಯದಲ್ಲಿ ರಾತ್ರಿ 11.30ರ ಸಮಯದಲ್ಲಿ ನೀರಾನೆಗೆ ಚಿಕಿತ್ಸೆ ನೀಡಲು ಸಮೀಕ್ಷಾ ರೆಡ್ಡಿ ತೆರಳಿದ್ದರು. ಈ ವೇಳೆ ನೀರಾನೆ ದಾಳಿಯಿಂದ ಆಕೆ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ಚಿಕಿತ್ಸೆ ನೀಡುವಾಗ ಮುಂಜಾಗ್ರತೆ ವಹಿಸಿಲ್ಲ. ಮಾರ್ಗಸೂಚಿಗಳನ್ನು ಪಾಲಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮಾರ್ಗಸೂಚಿ ಪ್ರಕಾರ ದೊಡ್ಡ ವನ್ಯಜೀವಿಗಳಿಗೆ ರಾತ್ರಿ ವೇಳೆಯಲ್ಲಿ ಯಾವುದೇ ಸುರಕ್ಷತೆಯಿಲ್ಲದೇ ಚಿಕಿತ್ಸೆ ನೀಡಬಾರದು. ಒಂದು ವೇಳೆ ಚಿಕಿತ್ಸೆ ನೀಡುವುದಿದ್ದರೆ ಪ್ರಾಣಿಗೆ ಅರಿವಳಿಕೆ ಚುಚ್ಚುಮದ್ದು ನೀಡಬೇಕು. ಜತೆಗೊಂದಿಷ್ಟು ಸಿಬ್ಬಂದಿ ಇರಬೇಕು. ಇದ್ಯಾವುದೂ ಇಲ್ಲಿ ಪಾಲನೆಯಾಗಿಲ್ಲ ಎಂದು ದೂರಿದರು.
ಡಾ.ಸಮೀಕ್ಷಾ ರೆಡ್ಡಿ ಯಾರ ಅನುಮತಿ ಪಡೆದು ಚಿಕಿತ್ಸೆ ನೀಡಲು ತೆರಳಿದ್ದರು ಎಂಬ ಬಗ್ಗೆ ಸೂಕ್ತ ತನಿಖೆಯಾಗಬೇಕು. ಈ ಘಟನೆಗೆ ನೇರ ಹೊಣೆಗಾರರಾದವರನ್ನು ಸೇವೆಯಿಂದ ವಜಾಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಡಿಸಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ವೇದಿಕೆ ಅಧ್ಯಕ್ಷ ವಾಟಾಳ್ ಮಂಜುನಾಥ್, ಪ್ರಮುಖರಾದ ಪ್ರವೀಣ್, ಸತೀಶ್ ಗೌಡ, ಸಂಜು, ಲೋಕೇಶ್, ಅಕ್ಬರ್ ಪಾಷಾ, ರವಿಕುಮಾರ್, ರಾಘವೇಂದ್ರ ಮುಂತಾದವರಿದ್ದರು.